ಬೆಂಗಳೂರು, ಏ. 14,ಕೊರೋನಾ ವೈರಾಣು ಸೋಂಕಿನ ಹರಡುವಿಕೆಯನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಎಲ್ಲಾ ಅಧಿಕಾರಿಗಳು ಸಮರೋಪಾದಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಒಟ್ಟಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ "ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ"ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೋನಾ ವೈರಾಣು ಸೋಂಕು ಬಾರಿ ವೇಗವಾಗಿ ಹರಡುತ್ತಿದ್ದು, ಇಲ್ಲಿಯವರೆಗೆ ಸೋಂಕು ಪತ್ತೆಯಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಸೋಂಕು ಪತ್ತೆಯಾಗಿರುವುದರಿಂದ ವೈದ್ಯಾಧಿಕಾರಿಗಳಿಗೆ ಸಹಕರಿಸುವ ಮೂಲಕ ಅಧಿಕಾರಿಗಳು ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಗ್ರಾಮವನ್ನು ಸಂಪೂರ್ಣ ಕ್ವಾರಂಟೈನ್ ಮಾಡಿ ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿರುವುದರಿಂದ ಸೋಂಕಿನ ತೀವ್ರತೆಯ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈಗಾಗಲೇ ಜಿಲ್ಲಾ ಹಂತದಲ್ಲಿ ಸೋಂಕಿನ ನಿಯಂತ್ರಣಕ್ಕೆ ಯೋಜನೆಯನ್ನು ರೂಪಿಸಲಾಗಿದ್ದು, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿಯೂ ಸಹ ತುರ್ತಾಗಿ ಸಮರ್ಪಕ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ಕೊರೋನಾ ವೈರಾಣು ಸೋಂಕು ತಡೆಗಟ್ಟಲು ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸುರಕ್ಷತಾ ಸಾಮಾಗ್ರಿಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಸರ್ಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಗುರುತಿಸಲಾಗಿರುವ ಆಸ್ಪತ್ರೆಗಳಲ್ಲಿ ವೈರಾಣು ತಡೆಗಟ್ಟಲು ಬೇಕಾಗುವ ಎಲ್ಲಾ ಸೌಕರ್ಯಗಳು ಇರುವಂತೆ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಲಾಕ್ ಡೌನ್ ಹಿನ್ನೆಲೆ ವಲಸೆ ಹಾಗೂ ಕಟ್ಟಡ ಕಾರ್ಮಿಕರಿಗೆ ದುಡಿಯುವುದಕ್ಕೆ ಅವಕಾಶವಿಲ್ಲದ ಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದ ಮೇರೆಗೆ ಅವರಿಗೆ ಆಹಾರ ಹಾಗೂ ವಸತಿ ಸೌಕರ್ಯವನ್ನು ಒದಗಿಸಲಾಗಿದ್ದು, ಎಸ್.ಡಿ.ಆರ್.ಎಫ್. ಅನುದಾನ ಹಾಗೂ ದಾನಿಗಳ ಸಹಕಾರದೊಂದಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಗಂಭೀರತೆ ಅರಿತು ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಆಹಾರ ಹಾಗೂ ವಸತಿ ಸೌಕರ್ಯ ಸೇರಿದಂತೆ ಇತರೆ ಯಾವುದೇ ಮೂಲಭೂತ ಸೌಕರ್ಯಗಳಲ್ಲಿ ಗುಣಮಟ್ಟದ ಕೊರತೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
ಪಡಿತರ ಚೀಟಿದಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ ಎರಡು ತಿಂಗಳ ಪಡಿತರವನ್ನು ನೀಡಲು ನಿರ್ಧರಿಸಿದ್ದು, ಈಗಾಗಲೇ ರಾಜ್ಯ ಸರ್ಕಾರದ ಪಡಿತರವನ್ನು ಫಲಾನುಭವಿಗಳಿಗೆ ನೀಡಲು ಕ್ರಮವಹಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಪಡಿತರ ಬಂದ ತಕ್ಷಣ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು. ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ನಾಲ್ಕು ತಿಂಗಳಿಗೆ ಆಗುವಷ್ಟು ಪಡಿತರವನ್ನು ಮುಂಚಿತವಾಗಿ ನೀಡಲಾಗುತ್ತಿದೆ. ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಅದರಂತೆ ಅವರಿಗೂ ಪಡಿತರವನ್ನು ನೀಡಬೇಕು. ಒಟ್ಟಿನಲ್ಲಿ ಅಧಿಕಾರಿಗಳು ಪಡಿತರ ವಿತರಣೆಯನ್ನು ಸಮರ್ಪಕವಾಗಿ ನೀಡಲು ಕ್ರಮವಹಿಸುವ ಮೂಲಕ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಮಂಜುನಾಥ್, ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಟಿ.ಆರ್.ಶೋಭಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.