ರಿಯಾದ್, ಜ ೨೩ ಚೀನಾದಲ್ಲಿ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಕೊರೊನಾ ವೈರಸ್ ಸೌದಿ ಅರೇಬಿಯಾದಲ್ಲೂ ವ್ಯಾಪಿಸುತ್ತಿದೆ. ದಾದಿಯೊಬ್ಬರ ರಕ್ಷ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇರಳದ ಕನಿಷ್ಠ ೩೦ ದಾದಿಯರನ್ನು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ಕೊಲ್ಲಿ ವರದಿಗಳು ತಿಳಿಸಿವೆ.
ಈ ಪೈಕಿ ಕೆಲವು ದಾದಿಯರು ಕೇರಳದಲ್ಲಿರುವ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಮ್ಮನ್ನು ಆಸ್ಪತ್ರೆಯ ಎರಡು ಕೋಣೆಗಳಲ್ಲಿ ಒಂದು ದಿನಕ್ಕಿಂತಲೂ ಹೆಚ್ಚು ಸಮಯ ಬಂಧಿಸಿ ಇರಿಸಲಾಗಿದೆ. ನಮ್ಮನ್ನು ಸರಿಯಾದ ಪರೀಕ್ಷೆಗಳಿಗೆ ಒಳಪಡಿಸಿಲ್ಲ. ಸೂಕ್ತವಾದ ಚಿಕಿತ್ಸೆಕಲ್ಪಿಸಲಾಗುತ್ತಿಲ್ಲ . ನಾವು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ ”ಎಂದು ಈ ಪೈಕಿ ಓರ್ವ ದಾದಿ ಮಲಯಾಳಂ ಸುದ್ದಿ ವಾಹಿನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಲಭ್ಯವಿರುವ ವಿವರಗಳ ಪ್ರಕಾರ, ಕೊಟ್ಟಾಯಂನ ಎಟ್ಟುಮನೂರ್ ಮೂಲದ ೩೮ ವರ್ಷದ ದಾದಿ ವೈರಸ್ ಗೆ ತುತ್ತಾಗಿದ್ದಾರೆ. ಫಿಲಿಪೈನ್ಸ್ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ಆಕೆ ವೈರಸ್ ಒಳಗಾಗಿದ್ದಾರೆ ಎನ್ನಲಾಗಿದೆ. ನಂತರ ಅಲ್ಲಿನ ಅಧಿಕಾರಿಗಳು, ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲಾ ದಾದಿಯರನ್ನು ಪ್ರತ್ಯೇಕಿಸಿ, ನಿರ್ಬಂಧಿಸಲಾಗಿದೆ. ಆದರೆ ನಿರ್ಬಂಧಿತಕ್ಕೆ ಒಳಗಾಗಿರುವ ದಾದಿಯರು ಇದೊಂದು ಗಾಬರಿಯ ಪ್ರತಿಕ್ರಿಯೆಯಾಗಿದೆ. ನಮ್ಮನ್ನು ಯಾವುದೇ ಪರೀಕ್ಷೆಗಳಿಗೆ ಒಳಪಡಿಸದೆ ತಮ್ಮನ್ನು ಪ್ರತ್ಯೇಕಿಸಲಾಗಿದೆ ಎಂದು ದೂರಿದ್ದಾರೆ. ಈ ಸಂಬಂಧ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅನಿವಾಸಿ ಕೇರಳೀಯರ ಸಂಘದ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.