ಬೀಜಿಂಗ್, ಫೆ. 10, ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ 3,062 ಹೊಸ ಕರೊನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಈ ಸೋಂಕಿಗೆ ಒಳಗಾದವರ ಸಂಖ್ಯೆ 40,171 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 910ಕ್ಕೇರಿದ್ದು, ಒಂದೇ ದೇಶದಲ್ಲಿ ಒಂದೇ ದಿನ 97 ಸಾವು ಸಂಭವಿಸಿದೆ. ನೋವಲ್ ಕರೋನವೈರಸ್ ನ್ಯುಮೋನಿಯಾದಿಂದ ಸಾವನ್ನಪ್ಪಿದವರ ಸಂಖ್ಯೆ 910 ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಶನಿವಾರ ದೃಢಪಡಿಸಿದೆ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆಸ್ಪತ್ರೆಯಲ್ಲಿರುವವರಲ್ಲಿ, ಸುಮಾರು 6,500 ಜನರಲ್ಲಿ ತೀವ್ರ ತರವಾದ ಪ್ರಕರಣಗಳಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂಕಿಅಂಶಗಳ ಪ್ರಕಾರ, 2002-03ರಲ್ಲಿ ಚೀನಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ವ್ಯಾಪಿಸಿದ್ದ ಸಾರ್ಸ್ ಎಂಬ ಸೋಂಕಿಗೆ 813 ಜನರು ಬಲಿಯಾಗಿದ್ದರು. ಇದೀಗ ಸಾರ್ಸ್ ಸೋಂಕಿನ ಸಾವಿಗಿಂತ ಕರೋನಾವೈರಸ್ ಸೋಂಕಿಗೆ ಹೆಚ್ಚಿನ ಸಾವು ಸಂಭವಿಸುತ್ತಿದೆ.ಡಿಸೆಂಬರ್‌ನಲ್ಲಿ ಈ ರೋಗವು ಮೊದಲು ಕಂಡುಬಂದ ಹುಬೈ ಪ್ರಾಂತ್ಯದಲ್ಲಿ ಒಂದೇ ರಾತ್ರಿಯಲ್ಲಿ 2,618 ಪ್ರಕರಣಗಳು ವರದಿಯಾಗಿವೆ, ಇದರೊಂದಿಗೆ ಒಟ್ಟು ಸೋಂಕು ಪೀಡಿತರ ಸಂಖ್ಯೆ ಸುಮಾರು 30,000 ಕ್ಕೆ ಏರಿದೆ ಎಂದು ಸೋಮವಾರ ಹುಬೈ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ದೇಶಾದ್ಯಂತ ವರದಿಯಾದ 97 ಸಾವುಗಳಲ್ಲಿ 91 ಸಾವುಗಳು ಹುಬೈನಲ್ಲಿ ಸಂಭವಿಸಿವೆ. ಪ್ರಾಂತ್ಯದ ಸುಮಾರು 1,800 ಸೋಂಕು ಪೀಡಿತರು ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಾಗರೋತ್ತರ ಪ್ರಕರಣಗಳು ನಿರಂತರವಾಗಿ ಏರುತ್ತಿರುವ ಮಧ್ಯೆ, ಚೀನಾಕ್ಕೆ ಇತ್ತೀಚೆಗೆ ಪ್ರಯಾಣ ಬೆಳೆಸಿದವರಿಗೆ ತಮ್ಮ ದೇಶಗಳ ಪ್ರವೇಶವನ್ನು ಜಪಾನ್, ಅಮೆರಿಕ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ಸರ್ಕಾರಗಳು ನಿರ್ಬಂಧಿಸಿವೆ. ಹಲವು ದೇಶಗಳು ತಮ್ಮ ನಾಗರಿಕರನ್ನು ಸಾಂಕ್ರಾಮಿಕ ರೋಗ ಮೊದಲು ಕಂಡು ಬಂದ ಮತ್ತು ಸೋಂಕಿನ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್‌ನಿಂದ ಸ್ಥಳಾಂತರಿಸಿವೆ. ಸೋಂಕಿನ ಬಗ್ಗೆ ತನಿಖೆ ನಡೆಸಲು ಸಹಾಯ ಮಾಡಲು ಡಬ್ಲ್ಯುಎಚ್‌ಒ ಅಂತಾರಾಷ್ಟ್ರೀಯ ತಜ್ಞರ ತಂಡ ಚೀನಾಕ್ಕೆ ತೆರಳಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಭಾನುವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.