ಕೊರೋನಾ ವೈರಸ್: ರಾಜ್ಯಕ್ಕೆ ಹೆಚ್ಚುವರಿ ಆಹಾರ ಧಾನ್ಯ: ಡಿ.ವಿ. ಪ್ರಸಾದ್

ಬೆಂಗಳೂರು,ಏ. 11; ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ಮಂಜೂರು ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಈ ಹೆಚ್ಚುವರಿ ಆಹಾರಧಾನ್ಯವನ್ನು ಬಿಡುಗಡೆ ಮಾಡಲಾಗಿದ್ದು, ಪಡಿತರ ಕುಟುಂಬದ ಪ್ರತಿ ವ್ಯಕ್ತಿಗೆ ಹೆಚ್ಚುವರಿಯಾಗಿ ತಿಂಗಳಿಗೆ ೫ ಕೆಜಿಯಂತೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಅಕ್ಕಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ. ಪ್ರಸಾದ್ ಈ ವಿಷಯ ತಿಳಿಸಿದ್ದು, ರಾಜ್ಯದ ಎಲ್ಲ ಪಡಿತರದಾರರು ಈ ಹೆಚ್ಚುವರಿ ಆಹಾರಧಾನ್ಯವನ್ನು ಪಡೆಯಲಿದ್ದಾರೆ. ಇದೇ ರೀತಿ ಕರ್ನಾಟಕಕ್ಕೂ ಹೆಚ್ಚುವರಿ ಧಾನ್ಯ ದೊರೆಯಲಿದೆ ಎಂದು  ತಿಳಿಸಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಜಾರಿಗೆ ಬಂದ ನಂತರ ೨ಲಕ್ಷದ ೪೪ ಸಾವಿರ ಮೆಟ್ರಿಕ್ ಟನ್ ಆಹಾರಧಾನ್ಯವನ್ನು ೮೭ ಸರಕು ಸಾಗಣೆ ರೈಲುಗಳಲ್ಲಿ ಕರ್ನಾಟಕಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.