ಚಿಕ್ಕಮಗಳೂರು,
ಏ 18 , ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸೇರಿ ಗಿರಿಶ್ರೇಣಿ
ತಾಣಗಳಿಗೆ ದೇಶ. ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದು, ಈ ಭಾಗದ ಜನತೆ
ಎಚ್ಚರಿಕೆಯಿಂದಿರಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಸಿರವಾಸೆ ಗ್ರಾಮದಲ್ಲಿ ಕಾರ್ಯಪಡೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ವಿವಿಧ
ಪ್ರದೇಶಗಳ ಪ್ರವಾಸಿಗರು ಲಾಕ್ ಡೌನ್ ಗೂ ಮುಂಚೆ ಅಧಿಕ ಸಂಖ್ಯೆಯಲ್ಲಿ ಈ ರಮಣೀಯ
ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಭಾಗದಲ್ಲಿ ಇನ್ನೂ ಯಾರಾದರು ಪ್ರವಾಸಿಗರು ವಾಸ್ತವ್ಯ
ಹೂಡಿದ್ದಲ್ಲಿ ಅಂತಹವರನ್ನು ಗುರುತಿಸಿ ಆಶಾ ಕಾರ್ಯಕರ್ತೆಯರಿಗೆ ಅಥವಾ ಪ್ರಾಥಮಿಕ ಆರೋಗ್ಯ
ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ
ನಿಗಾವಹಿಸಬೇಕು ಎಂದರು. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ
ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆ-ಮನೆಗಳಿಗೆ ಭೇಟಿ ನೀಡಿ ಕೊರೋನಾ
ಸೋಂಕಿನ ಕುರಿತು ಮಾಹಿತಿ ಸಂಗ್ರಹಿಸಬೇಕು. ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ಜನರಲ್ಲಿ
ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.ಆಶಾ ಕಾರ್ಯಕರ್ತೆಯರು ಹೊರ ಜಿಲ್ಲೆ ಹಾಗೂ ಹೊರ
ರಾಜ್ಯಗಳಿಂದ ಬಂದವರಿದ್ದಲ್ಲಿ ಗುರುತಿಸಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ
ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿ ಹೋಮ್ ಕ್ವಾರಂಟೈನ್‌ಗಳಲ್ಲಿ
ಇರುವಂತೆ ಸಲಹೆ ನೀಡಬೇಕು, ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಸುರಕ್ಷಾ ಸಾಧನಗಳಾದ
ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿ.ಟಿ.
ರವಿ ಸಲಹೆ ಮಾಡಿದರು.