ತಂಬಾಕು ಜಿಗಿದು ಎಲ್ಲೆಂದರಲ್ಲಿ ಉಗುಳಿದರೆ ಕೊರೋನಾ ಹೆಚ್ಚಾಗುತ್ತೆ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ.....

ಬೆಂಗಳೂರು,ಏ. 11; ತಂಬಾಕು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯಬೇಕು. ಇಂತಹ ಕ್ರಮಗಳಿಂದಲೂ ಸಹ ಸೋಂಕು ಹೆಚ್ಚಾಗಲಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಆರೋಗ್ಯ ಸಚಿವಾಲು ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜತೆಗೆ ಹೊಗೆರಹಿತ ತಂಬಾಕು ಬಳಕೆಯನ್ನೂ ಸಹ ನಿರ್ಬಂಧಿಸಬೇಕು ಎಂದು ಹೇಳಿದೆ. ತಂಬಾಕು ಉತ್ಪನ್ನಗಳು, ಪಾನ್ ಮಸಾಲ ಮತ್ತು ಸುಪಾರಿ ಜಗಿಯುವುದರಿಂದ ಜೊಲ್ಲುರಸದ ಉತ್ಪಾದನೆ ಹೆಚ್ಚಾಗುತ್ತದೆ. ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸೋಂಕು ಉಳ್ಳವರಿದ್ದರೆ ಅದು ಒಬ್ಬರಿಂದ ಒಬ್ಬರಿಗ ಹರಡುತ್ತದೆ ಎಂದು ಹೇಳಿದೆ.  ಕೊರೋನಾ ವೈರಾಣು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಸೂಚಿಸಲಾಗಿದೆ. ಸರ್ಕಾರದ ಸೂಚನೆಯನ್ನು ಉಲ್ಲಂಘನೆ ಮಾಡುವವರ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು "ಸಾಂಕ್ರಾಮಿಕ ರೋಗಗಳ ನಿರ್ವಹಣೆ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ-೧೮೬೦ ಮತ್ತು ಅಪರಾಧ ನಿಯಂತ್ರಣ ಸಂಹಿತೆಯಡಿ ಕ್ರಮ ತೆಗೆದುಕೊಳ್ಳುವ ಕುರಿತು ಆದೇಶ ಹೊರಡಿಸಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ ೯ಕ್ಕೂ ಹೆಚ್ಚು ರಾಜ್ಯಗಳು ಈಗಾಗಲೇ ತಂಬಾಕು ಬಳಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧಿಸುವ ಆದೇಶ ಹೊರಡಿಸಿವೆ.