ಬೆಂಗಳೂರು, ಜ 28, ಚೀನಾದಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಕರೋನಾ ವೈರಾಣು ಸೋಂಕು ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ವಿವಿಧ ವಿಮಾನ ನಿಲ್ದಾಣಗಳು, ರೈಲು, ಬಸ್ ನಿಲ್ದಾಣಗಳು ಗಡಿ ಪ್ರದೇಶಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆ ವಿಶೇಷ ನಿಗಾ ವಹಿಸಲಾಗಿದೆ.
ಕಳೆದ 10 ದಿನಗಳ ಹಿಂದೆ ನೆರೆಯ ದೇಶದಿಂದ ರಾಜ್ಯಕ್ಕೆ ಬಂದಿರುವ ಇಬ್ಬರು ಬೆಂಗಳೂರು ನಗರ ವಾಸಿಗಳನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಿಗಾ ಇರಿಸಲಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.ಇದಲ್ಲದೇ ಮೂರು ದಿನಗಳ ಹಿಂದೆ ಇನ್ನೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ತಪಾಸಣೆ ನಂತರ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕರೋನಾ ವೈರಾಣು ಸೋಂಕು ಹಿನ್ನೆಲೆಯಲ್ಲಿ ೧೩೭ ವಿಮಾನಗಳ ೨೯ ಸಾವಿರದ ೭೦೭ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ೧೨ ಪ್ರಯಾಣಿಕರ ರಕ್ತ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೆ ಯಾವುದೇ ವ್ಯಕ್ತಿ ಕರೋನಾ ವೈರಾಣು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿಲ್ಲ. ಹಾಗೆಂದು ನಿರ್ಲಕ್ಷ್ಯವಹಿಸುವುದು ಸಲ್ಲದು ಎಂದು ಹೇಳಿದೆ. ಅಲ್ಲದೇ ಅಂತಾರಾಷ್ಟ್ರೀಯ ಬಂದರು, ನೇಪಾಳ ಗಡಿ ಭಾಗದ ಚೆಕ್ ಪೋಸ್ಟ್‌ಗಳಲ್ಲಿ ರೋಗ ತಪಾಸಣೆಗಾಗಿ ಹೆಚ್ಚಿನ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೇಪಾಳ ಗಡಿಭಾಗಕ್ಕೆ ಹೊಂದಿಕೊಂಡ ೫ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪರಿಶೀಲನಾ ಸಭೆ ನಡೆಸಿದೆ.ರೋಗ ಭಾರತದಲ್ಲಿ ಹರಡದಂತೆ ಕೇಂದ್ರ ಹಲವು ಕ್ರಮ ಕೈಗೊಂಡಿದ್ದು, ಚೀನಾಕ್ಕೆ ನೇರ ಅಥವಾ ಪರೋಕ್ಷವಾಗಿ ಸಂಪರ್ಕ ಇರುವ ಎಲ್ಲ ವಿಮಾನದಲ್ಲಿ ಪ್ರಯಾಣಿಸುವವರಿಗೆ ಕರೋನಾ ವೈರಾಣು ಸೋಂಕಿನ ಕುರಿತು ಮಾಹಿತಿ, ವಿಮಾನದಲ್ಲಿ ರೋಗ ಕುರಿತು ಮಾಹಿತಿ, ಆಗಿಂದಾಗ್ಗೆ ಘೋಷಣೆ ನೀಡಿಕೆ, ಹೆಲ್ತ್ ಕಾರ್ಡ್ ವಿತರಣೆ ಮಾಡಲು ಸೂಚಿಸಲಾಗಿದೆ.ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲು ಕಳೆದ ಜನವರಿ ೧ ರಿಂದ ಚೀನಾಗೆ ಪ್ರಯಾಣ ಮಾಡಿದ ಪ್ರಯಾಣಿಕರು, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡರೇ ತಕ್ಷಣವೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗುವಂತೆ ಸಲಹೆ ಮಾಡಿದೆ.