ಬರ್ಲಿನ್, ಜ 29, ಜರ್ಮನಿಯ ಬವಾರಿಯ ಪ್ರದೇಶದಲ್ಲಿ ಮತ್ತೆ ಮೂರು ನೋವೆಲ್ ಕೊರೋನಾ ವೈರಾಣು ಪ್ರಕರಣಗಳು ದೃಢಪಟ್ಟಿವೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಪ್ರಕಟಿಸಿದೆ. ಸೋಮವಾರ ಮೊದಲ ಪ್ರಕರಣ ದೃಢಪಟ್ಟಿದ್ದು, ಉಳಿದ ಪ್ರಕರಣಗಳು ಕೂಡ ಅದಕ್ಕೆ ಸಂಬಂಧಿಸಿದ್ದಾಗಿದೆ. ಮೊದಲ ರೋಗಿ ಉದ್ಯೋಗ ಮಾಡುತ್ತಿದ್ದ ಕಂಪನಿಯ ಮೂರು ಮಂದಿಯೇ ಈ ಸೋಂಕಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಮೂರು ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ, ಪ್ರತ್ಯೇಕವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಈ ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದ ಅದೇ ಕಂಪನಿಯ 40 ಉದ್ಯೋಗಿಗಳನ್ನು ಕೂಡ ತಪಾಸಣೆಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.