ಮಂಗಳೂರು, ಏ.17, ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ವಲಯದ ಅಬಕಾರಿ ಅಧಿಕಾರಿಗಳು 400 ಲೀಟರ್ ಹುಳಿ ರಸವನ್ನು ವಶಪಡಿಸಿಕೊಂಡಿದ್ದಾರೆ. ಇನೊಲಿ ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಪಜಿಲ ಎಂಬಲ್ಲಿನ ಹೊಳೆ ಬದಿಯಲ್ಲಿ ಎರಡು ಬ್ಯಾರೇಲ್‌ಗಳಲ್ಲಿ ಭಟ್ಟಿ ಸಾರಾಯಿ ತಯಾರಿಕೆ ಗಾಗಿ ದಾಸ್ತಾನಿಸಿರುವ 400 ಲೀಟರ್ ಗಳಷ್ಟು ಹುಳಿ ರಸವನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ವಲಯದ ಅಬಕಾರಿ ನಿರೀಕ್ಷಕರು ರತ್ನಾಕರ್ ರೈ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಶೈಲಜಾ ಕೋಟೆ ಅವರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕರು ವಿನೋದ್ ಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರು ಉಪ ವಿಭಾಗ-1 ರ ಅಬಕಾರಿ ಉಪ ಅಧೀಕ್ಷಕರು ಶಿವಪ್ರಸಾದ್ ಮಾರ್ಗದರ್ಶನದಂತೆ ಉಪ ವಿಭಾಗ-1ರ ಎಲ್ಲಾ ಅಬಕಾರಿ ನಿರೀಕ್ಷಕರು,ಉಪ-ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಈ ಕಾರ್ಯಾಚರಣೆ ಕೈಗೊಂಡಿದ್ದರು.