ಸಹಕಾರಿ ಸಂಘಗಳು ಸಾಲದ ಜೊತೆಗೆ ವಿವಿಧ ಸೇವೆ ನೀಡಲಿ

ಸಹಕಾರಿ ಸಂಘಗಳು ಸಾಲದ ಜೊತೆಗೆ ವಿವಿಧ ಸೇವೆ ನೀಡಲಿ  Cooperative societies should provide various services in addition to loans

ಲೋಕದರ್ಶನ ವರದಿ 

ಹಾರೂಗೇರಿ 26: ಬೆಳಗಾವಿ ಜಿಲ್ಲೆಯ ಪಿಕೆಪಿಎಸ್ ಸಂಘಗಳು ಕೇವಲ ಸಾಲ ನೀಡುವುದಕ್ಕೆ ಸೀಮಿತವಾಗದೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ರೈತರಿಗೆ ಒದಗಿಸಲಾಗುತ್ತಿರುವ ವಿವಿಧ ಸೇವೆ ಮತ್ತು ಸೌಲಭ್ಯಗಳನ್ನು ಜಿಲ್ಲೆಯ ರೈತರಿಗೆ ಒದಗಿಸಬೇಕು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಹೇಳಿದರು.  

ಪಟ್ಟಣದ ಶ್ರೀ ಸಿದ್ಧಿವಿನಾಯಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಂಯುಕ್ತ ಆಶ್ರಯದಲ್ಲಿ ಹಾರೂಗೇರಿ-ಮುಗಳಖೋಡ ವಿಭಾಗದ ಪಿಕೆಪಿಎಸ್ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ಪಿಕೆಪಿಎಸ್ ಸಂಘಗಳು ಸೂಪರ್ ಮಾರ್ಕೆಟ್, ಗ್ರಾಹಕರ ಅಂಗಡಿಗಳು, ಗೊಬ್ಬರ ಹಾಗೂ ಕಾಮನ್ ಸರ್ವಿಸ್ ಸೆಂಟರ್ ಸೇರಿದಂತೆ ವಿವಿಧ ಸೇವೆಗಳನ್ನು ಆರಂಭಿಸುವ ಮೂಲಕ ರೈತರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.  

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಎಲ್‌.ಎಸ್‌. ಜಂಬಗಿ ಅವರು ಯಶಸ್ವಿನಿ ಯೋಜನೆ ಕುರಿತು ಮಾಹಿತಿ ನೀಡಿದರು. ಕೂಡಚಿ ಪಿಕೆಪಿಎಸ್ ಸಂಘದ ಬಾಲಾಸಾಹೇಬ ದರೂರ ಹಾಗೂ ಜತ್ತಾಳ ಪಿಕೆಪಿಎಸ್ ಸಂಘದ ಮಹಾವೀರ ಜೋಕೆ ಅವರು ತಮ್ಮ ಸಂಘಗಳಲ್ಲಿ ಕೈಗೊಂಡಿರುವ ಸೂಪರ್ ಮಾರ್ಕೆಟ್ ವ್ಯವಹಾರ ಹಾಗೂ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು. ಹಾರೂಗೇರಿ ಹಾಗೂ ಮುಗಳಖೋಡ ವಿಭಾಗದ 60ಕ್ಕೂ ಹೆಚ್ಚು ಪಿಕೆಪಿಎಸ್ಗಳ 300ಕ್ಕೂ ಹೆಚ್ಚು ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.