ಸಹಕಾರಿ ಸಂಸ್ಥೆಗಳು ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಿ

ಸಹಕಾರಿ ಸಂಸ್ಥೆಗಳು ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಿ  Cooperative societies should provide health insurance facilities to their members

ಲೋಕದರ್ಶನ ವರದಿ 

ಮಾಂಜರಿ 21: ಗ್ರಾಮೀಣ ಭಾಗದಲ್ಲಿ ಸಹಕಾರಿ ತತ್ವದಡಿ ಸ್ಥಾಪನೆಯಾದ ಸಂಸ್ಥೆಗಳು ತಮ್ಮ ಸದಸ್ಯರು ಹಾಗೂ ಸಿಬ್ಬಂದಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಇದರಿಂದ ಸದಸ್ಯರ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಗದೀಶ ಕವಟಗಿಮಠ ಹೇಳಿದರು.  ಮಾಂಜರಿಯಲ್ಲಿ ಭಾನುವಾರ ನಡೆದ ‘ಕೆ.ಪಿ. ಮಗೆಣ್ಣವರ  ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ’ಯ 37ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಕೆ.ಪಿ. ಮಗೆಣ್ಣವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ರಾಜಕೀಯ, ಸಮಾಜಕಾರಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಕಲ್ಲಪ್ಪಣ್ಣ ಮಗೆಣ್ಣವರ ಅವರ ಸೇವೆ ಗಮನಾರ್ಹವಾಗಿದೆ. ಅವರ ಜನಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.  

ಸಂಸ್ಥೆಯ ಆರ್ಥಿಕ ಸಾಧನೆ:  

ಸಂಸ್ಥೆಯ ಅಧ್ಯಕ್ಷ ಸತೀಶ ಮಗೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕ ಪ್ರದೀಪ ಮಗೆಣ್ಣವರ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯ ಒಟ್ಟು ಸದಸ್ಯರ ಸಂಖ್ಯೆ 12,046 ಆಗಿದ್ದು, ಷೇರು ಬಂಡವಾಳ 89.30 ಲಕ್ಷ, ಒಟ್ಟು ನಿಧಿ 46.38 ಕೋಟಿ, ಒಟ್ಟು ಠೇವಣಿ 370 ಕೋಟಿ, ಸಾಲ ವಿತರಣೆ 171.24 ಕೋಟಿ, ಹೂಡಿಕೆ 234.15 ಕೋಟಿ ಹಾಗೂ ದುಡಿಯುವ ಬಂಡವಾಳ 428.02 ಕೋಟಿ ಇದೆ. ಮಾರ್ಚ್‌ ಅಂತ್ಯಕ್ಕೆ 10.06 ಕೋಟಿ ನಿವ್ವಳ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು.  ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಮಿಜ್ರಿ, ನಿರ್ದೇಶಕರು, ವಿವಿಧ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶಿವಲೀಲಾ ಕೋಕಣೆ ಸ್ವಾಗತಿಸಿದರು. ರಾಜಶ್ರೀ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.