ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಸುವ್ಯವಸ್ಥಿತವಾಗಿ ಜರುಗಲು ರಾಜಕೀಯ ಪಕ್ಷಗಳು, ಸಾರ್ವಜನಿಕರ ಸಹಕಾರ ಅಗತ್ಯ -ಜಿಲ್ಲಾಧಿಕಾರಿ ಸ್ನೇಹಲ್ ಆರ್‌

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಸುವ್ಯವಸ್ಥಿತವಾಗಿ ಜರುಗಲು ರಾಜಕೀಯ ಪಕ್ಷಗಳು, ಸಾರ್ವಜನಿಕರ ಸಹಕಾರ ಅಗತ್ಯ -ಜಿಲ್ಲಾಧಿಕಾರಿ ಸ್ನೇಹಲ್ ಆರ್‌ Cooperation of political parties and public is necessary for smooth conduct of special comprehensive

ಲೋಕದರ್ಶನ ವರದಿ 

ಧಾರವಾಡ  05: ಧಾರವಾಡ ಜಿಲ್ಲೆಯಾದ್ಯಂತ ಜೂನ್ 30 ರಿಂದ ಅಕ್ಟೋಬರ್ 7 ರವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯಲಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಸುವ್ಯವಸ್ಥಿತವಾಗಿ ಜರುಗಲು ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯವಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು.  

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2026 ಕಾರ್ಯವನ್ನು ಧಾರವಾಡ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಪರಿಷ್ಕರಣೆ ಕಾರ್ಯದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ಅರ್ಹತಾ ದಿನಾಂಕವನ್ನು 01.10.2026 ನಿಗದಿಪಡಿಸಲಾಗಿದೆ. ಜೂನ್ 20 ರಿಂದ ಜೂನ್ 29 ರವರೆಗೆ ಮತದಾರರ ಪಟ್ಟಿ ತಯಾರಿ, ತರಬೇತಿ ಮತ್ತು ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು.

ಬಿಎಲ್‌ಓಗಳು ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡುವರು. ಕರಡು ಮತದಾರರ ಪಟ್ಟಿಯನ್ನು ಆಗಸ್ಟ 5 ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ 5 ರಿಂದ ಸೆಪ್ಟೆಂಬರ್ 4 ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳ ವಿಲೇವಾರಿಯನ್ನು ಆಗಸ್ಟ 5 ರಿಂದ ಅಕ್ಟೋಬರ್ 3 ರವರೆಗೆ ಕೈಗೊಳ್ಳಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7 ರಂದು ಪ್ರಕಟಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.  

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,665 ಮತಗಟ್ಟೆಗಳಿದ್ದು, ಒಟ್ಟು 16,22,294 ಮತದಾರರಿದ್ದಾರೆ. ಅದರಲ್ಲಿ 8,05,624 ಪುರುಷರು, 8,16,572 ಮಹಿಳೆಯರು ಹಾಗೂ 98 ತೃತೀಯ ಲಿಂಗದ ಮತದಾರರು ಸೇರಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲೆಯ 1,665 ಮತಗಟ್ಟೆಗಳಲ್ಲಿ 1,665 ಬಿಎಲ್‌ಒಗಳು ಮತ್ತು 230 ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.  

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಗೆ ಸಂಬಂಧಿಸಿದಂತೆ ಮಾತ್ರ ಬಿಎಲ್‌ಎಗಳ ನೇಮಕವಾಗಿದ್ದು ಬಾಕಿ ಉಳಿದ ರಾಜಕೀಯ ಪಕ್ಷಗಳು ತಕ್ಷಣ ಬಿಎಲ್‌ಎಗಳ ನೇಮಕಾತಿ ಮಾಡಿದ ಬಗ್ಗೆ ಬಿಎಲ್‌ಎ-2 ನಮೂನೆಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ತಕ್ಷಣ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.  ಬಿಎಲ್‌ಎ ಗಳನ್ನು ನೇಮಕಾತಿ ಮಾಡದೇ ಇರುವ ರಾಜಕೀಯ ಪಕ್ಷಗಳು ಕೂಡಲೇ ಬಿಎಲ್‌ಎ ಗಳನ್ನು ನೇಮಕ ಮಾಡಬೇಕಿದೆ ಎಂದರು.