ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ

ಮಾಸ್ಕೋ, ಏ 10,ಜಾಗತಿಕ ತೈಲ ಮಾರುಕಟ್ಟೆ ಸ್ಥಿತಿ ಕುರಿತಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಚರ್ಚೆ ನಡೆಸಿದ್ದು ಮಾರುಕಟ್ಟೆ ಸ್ಥಿರವಾಗಿರಲು ಪರಸ್ಪರ ಸಹಕಾರದ ನಡೆ ತೋರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಈ ಬಗ್ಗೆ ರಷ್ಯಾ ಅಧ್ಯಕ್ಷೀಯ ಕಚೇರಿ ಶುಕ್ರವಾರ ನೀಡಿರುವ ಪ್ರಕಟಣೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರೊಂದಿಗೆ ದೂರವಾಣಿ ಮೂಲಕ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ ನಡೆಸಿದ್ದಾರೆ. ತೈಲ ಮಾರುಕಟ್ಟೆಯ ಸ್ಥಿತಿ, ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘ ಒಪೆಕ್ ವಿಶೇಷ ಸಭೆಯ ಅಂಶಗಳನ್ನು ಈ ಚರ್ಚೆ ವೇಳೆ ಪರಿಗಣಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ತೈಲ ಬೆಲೆಗಳ ನಕಾರಾತ್ಮಕ ಪ್ರಭಾವ ತಗ್ಗಿಸಿ ಈ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗದಂತೆ ಖಾತ್ರಿಪಡಿಸಿಕೊಳ್ಳಲು ನಾಯಕರು ಪರಸ್ಪರ ಸಹಕಾರ ನಡೆ ತೋರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.