ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ವಿಶೇಷ ಪರೀಕ್ಷೆಗಳ ಕೊಡುಗೆ: ಪ್ರೊ. ಕೆ. ರಾಮಕೃಷ್ಣಯ್ಯ

ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ವಿಶೇಷ ಪರೀಕ್ಷೆಗಳ ಕೊಡುಗೆ: ಪ್ರೊ. ಕೆ. ರಾಮಕೃಷ್ಣಯ್ಯ Contribution of Special Examinations to the Cultural Heritage of Kalyana Karnataka: Prof. K. Ramakri

ಬಳ್ಳಾರಿ 14:  ನಗರದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಸಂಗೀತ, ನೃತ್ಯ ಹಾಗೂ ನಾಟಕ ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡಿರುವ ಸಾಂಸ್ಕೃತಿಕ ನೆಲೆಯಾಗಿದ್ದು, ಇಲ್ಲಿನ ಕಲಾ ಪರಂಪರೆಯನ್ನು ಗುರುಕುಲ ಪದ್ಧತಿಯ ಮೂಲಕ ಇಂದಿಗೂ ಜೀವಂತವಾಗಿಡಲಾಗುತ್ತಿದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ. ರಾಮಕೃಷ್ಣಯ್ಯ ಅಭಿಪ್ರಾಯಪಟ್ಟರು.ನಗರದ ಶ್ರೀಮೇಧಾ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕಾಲೇಜಿನಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾದ 2025ಹಿ26್ಫೂ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯಗಳ ಪ್ರಾಯೋಗಿಕ ಪರೀಕ್ಷೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಮಹನೀಯರು ಸಂಗೀತ ಮತ್ತು ಪ್ರದರ್ಶನ ಕಲೆಗಳ ಉಳಿವು ಹಾಗೂ ಬೆಳವಣಿಗೆಗಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಅವರ ಕಲಾ ಪರಂಪರೆ ಇಂದಿಗೂ ಜೀವಂತವಾಗಿದ್ದು, ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಪರಂಪರಾಗತ ಕಲೆಯತ್ತ ಆಸಕ್ತಿ ತೋರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.ಸಂಗೀತ ಮತ್ತು ನೃತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅವು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವ ಪ್ರಮುಖ ಸಾಧನಗಳಾಗಿವೆ. ಇಂತಹ ವಿಶೇಷ ಪರೀಕ್ಷೆಗಳು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿವೆ ಎಂದು ಅವರು ತಿಳಿಸಿದರು.

ಪರೀಕ್ಷಾ ಕೇಂದ್ರದ ಪ್ರಾಂಶುಪಾಲರು ರಾಮ್ ಕಿರಣ್ ಕೆ. ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸಂಗೀತ, ನೃತ್ಯ ಹಾಗೂ ನಾಟಕಗಳ ಪ್ರಾದೇಶಿಕ ಕಚೇರಿ ಸ್ಥಾಪಿಸಿದರೆ ಗ್ರಾಮೀಣ ಭಾಗದ ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಪರೀಕ್ಷೆ, ತರಬೇತಿ ಹಾಗೂ ಆಡಳಿತಾತ್ಮಕ ಕಾರ್ಯಗಳಿಗಾಗಿ ಮೈಸೂರಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಉಪಕುಲಪತಿಗಳ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಉಪಕುಲಪತಿ ಪ್ರೊ. ಕೆ. ರಾಮಕೃಷ್ಣಯ್ಯ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನೃತ್ಯ ಶಿಕ್ಷಕ ಜಿಲಾನ್ ಬಾಷಾ, ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ತೂರ್ನೂರು, ಮಾಸ್ಟರ್ ಅಭಿಷೇಕ್, ಶ್ರೀಮತಿ ರಾಜೇಶ್ವರಿ, ರೇಣುಕಾ, ದೊಡ್ಡಯ್ಯ ಗವಾಯಿಗಳು, ನೃತ್ಯ ಶಿಕ್ಷಕರಾದ ಅಂಜಲಿ ಹಾಗೂ ಅಲ್ತಾಫ್,

ವಿಶ್ವವಿದ್ಯಾಲಯ ಸಂಯೋಜಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯದ ವತಿಯಿಂದ ವಿಶೇಷ ಸಂಗೀತ, ನೃತ್ಯ ಮತ್ತು ತಾಳವಾದ್ಯಗಳ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಮೇ 10ರಂದು ಲಿಖಿತ ಪರೀಕ್ಷೆಗಳು ನಡೆದಿದ್ದು, ಮೇ 12 ಮತ್ತು 13ರಂದು ಪ್ರಾಯೋಗಿಕ ಪರೀಕ್ಷೆಗಳು ಜರುಗಿದವು. ಒಟ್ಟು 266 ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು.ಭರತನಾಟ್ಯದ ಬಣ್ಣ ಬಣ್ಣದ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ಸಂಗೀತ ಗಾಯನ ಹಾಗೂ ನೃತ್ಯ ಪ್ರದರ್ಶನಗಳ ಮೂಲಕ ಭಾರತೀಯ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿ ಗಮನ ಸೆಳೆಯಿತು.