ಬೆಂಗಳೂರು, ಏ.16,ಸಿಸಿಬಿ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿರುವ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.ಮುತ್ತಪ್ಪ ರೈ ಆನಾರೋಗ್ಯ ಪೀಡಿತ ರಾಗಿರುವುದರಿಂದ ಅವರ ಬಿಡದಿಯಲ್ಲಿನಲ್ಲಿರುವ ಮನೆಗೆ ತೆರಳಿ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ಆಧಿಕಾರಿಗಳ ತಂಡ ರೈ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ.
ಕ್ಯಾನ್ಸರ್ ಪೀಡಿತರಾಗಿರುವ ರೈ ಅವರ ಆರೋಗ್ಯ ಕೆಲವು ತಿಂಗಳುಗಳಿಂದ ತೀವ್ರ ಹದಗೆಟ್ಟಿದೆ. ರವಿ ಪೂಜಾರಿ ಭಾಗಿಯಾದ ಕೆಲವು ಪ್ರಕರಣಗಳಲ್ಲಿ ರೈ ಹೆಸರೂ ತಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಕೆಲವು ಮಹತ್ವದ ಸಂಗತಿಗಳನ್ನು ವಿಚಾರಣೆಯ ವೇಳೆ ರೈ ಹಂಚಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ರಾಜ್ಯ ಪೊಲೀಸರ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಸೆನಗಲ್‌ನಲ್ಲಿ ವಶಕ್ಕೆ ಪಡೆದು ಕರೆದುಕೊಂಡು ಬಂದಿತ್ತು.ಪೂಜಾರಿ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಪ್ರಕರಣಗಳಿವೆ. ಭೂಗತ ಪಾತಕಿಗಳಾದ ಛೋಟಾ ರಾಜನ್, ದಾವೂದ್ ಇಬ್ರಾಹಿಂ ತಂಡದಲ್ಲಿ ಗುರುತಿಸಿಕೊಂಡಿದ್ದ ರವಿ ಪೂಜಾರಿ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗಣ್ಯರಿಗೆ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಕೆಲವು ಪೊಲೀಸ್ ಅಧಿಕಾರಿಗಳು ಕೂಡ ಆತನೊಂದಿಗೆ ಅಪರಾಧ ಪ್ರಕರಣದಲ್ಲಿ ಕೈಜೋಡಿಸಿರುವುದು ಕೂಡ ಇತ್ತೀಚೆಗೆ ಬೆಳಕಿಗೆ ಬಂದಿತ್ತು.