ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಮಾಲೋಚನಾ ಸಭೆ

ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಮಾಲೋಚನಾ ಸಭೆ  Consultative meeting of devotees regarding the selection of the successor to the Bantanala-Lachyan P

 ಇಂಡಿ 01: ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗಗಳ ಲಕ್ಷಾಂತರ ಭಕ್ತರ ಆರಾಧ್ಯ ಧಾರ್ಮಿಕ ಕೇಂದ್ರವಾಗಿರುವ ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಇಂದು ಲಚ್ಯಾಣದ ಶ್ರೀ ಸಿದ್ಧಲಿಂಗೇಶ್ವರ ಕುಮಾರಿ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಭಕ್ತರು, ಹಿರಿಯರು ಹಾಗೂ ಗಣ್ಯರ ಸಮಾಲೋಚನಾ ಸಭೆ ನಡೆಯಿತು.  

ಸಭೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಸ್ವಾಮೀಜಿ ಅವರು 2021-22ರಲ್ಲಿ ಲಚ್ಯಾಣ ಮಠದಲ್ಲಿ ನಡೆದ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಮ್ಮುಖದಲ್ಲಿ ಚರ್ಚಿಸಿ, ಆಯ್ಕೆ ಪ್ರಕ್ರಿಯೆಗಾಗಿ ಐವರು ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಿದ್ದನ್ನು ಸಭೆಯಲ್ಲಿ ಸ್ಮರಿಸಲಾಯಿತು.  

ಸಭೆಯಲ್ಲಿ ಮಾತನಾಡಿದ ಭಕ್ತರು, ಅಂದಿನ ಆಯ್ಕೆ ಸಮಿತಿಯನ್ನೇ ಗೌರವಿಸಿ, ಸಮಿತಿಯ ಎಲ್ಲಾ ಸದಸ್ಯರು ಪರಸ್ಪರ ಚರ್ಚೆ ನಡೆಸಿ ಸರ್ವಾನುಮತದ ನಿರ್ಧಾರದ ಮೂಲಕ ಯೋಗ್ಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.  

ಇತ್ತೀಚಿನ ದಿನಗಳಲ್ಲಿ ಆಯ್ಕೆ ಸಮಿತಿಯ ಗಮನಕ್ಕೆ ತಾರದೇ ವಿವಿಧ ಕಡೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಉತ್ತರಾಧಿಕಾರಿ ಆಯ್ಕೆ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಅಭಿಪ್ರಾಯವನ್ನು ಸಭೆ ವ್ಯಕ್ತಪಡಿಸಿತು.  

ಸಭೆಯಲ್ಲಿ ಒಮ್ಮತದಿಂದ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಾಜಮುಖಿ ಸೇವೆ, ತ್ರಿವಿಧ ದಾಸೋಹ ಹಾಗೂ ಶಿಕ್ಷಣ ಕ್ರಾಂತಿಯ ಮೂಲಕ ಪೀಠದ ಘನತೆ, ಗೌರವ ಮತ್ತು ಪರಂಪರೆಯನ್ನು ಉಳಿಸುವ ಜವಾಬ್ದಾರಿ ಆಯ್ಕೆ ಸಮಿತಿಯ ಮೇಲಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.  

ಸಭೆಯಲ್ಲಿ ಎಂ.ಕೆ. ಬಿರಾದಾರ, ಎಂ.ಎಸ್‌. ಮುಜಗೊಂಡ, ಜಗನ್ನಾಥ ಕೋಟೆ, ಡಿ.ಎಸ್‌. ಪಾಟೀಲ, ಚಂದು ಯಳವಿಮಠ, ಶಿವಾನಂದ ಲಚ್ಯಾಣ, ನಾಮದೇವ ಬನಸೋಡೆ, ಮಲಕಪ್ಪ ಕೋಷ್ಟಿ, ಮಲಕಪ್ಪ ಯಳವಿಮಠ, ಮಹಿಳಾ ಭಕ್ತರಾದ ಶ್ರೀಮತಿ ಜಗದೇವಿ ನಾಗಣಸೂರ, ಶ್ರೀಮತಿ ಶ್ರೀದೇವಿ ಸಿದ್ದರಾಮಶೆಟ್ಟಿ, ಶ್ರೀಮತಿ ರಾಜೇಶ್ವರಿ ಧ. ಮುಜಗೊಂಡ, ಶ್ರೀಮತಿ ಮಹಾನಂದ ಬಿರಾದಾರ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿರಿಯ ಭಕ್ತರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡರು.