ಗಾಳಿ-ಮಳೆ ರಭಸಕ್ಕೆ ನಿರ್ಮಾಣ ಹಂತದ ಮಾಲಗಂಬ ನೆಲಸಮ: ಗ್ರಾಮಸ್ಥರಲ್ಲಿ ಆತಂಕ

ಗಾಳಿ-ಮಳೆ ರಭಸಕ್ಕೆ ನಿರ್ಮಾಣ ಹಂತದ ಮಾಲಗಂಬ ನೆಲಸಮ: ಗ್ರಾಮಸ್ಥರಲ್ಲಿ ಆತಂಕ Construction site in Malagamba leveled due to heavy winds and rain: Villagers worried

ಲೋಕದರ್ಶನ ವರದಿ  

ಇಂಡಿ  25: ತಾಲೂಕಿನ ಶಿರಗೂರ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುಮಾರು 46 ಅಡಿ ಎತ್ತರದ ಮಾಲಗಂಬ ಭಾರೀ ಗಾಳಿ-ಮಳೆಯ ರಭಸಕ್ಕೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಸಂಪೂರ್ಣವಾಗಿ ಕುಸಿದು ನೆಲಸಮಗೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಶ್ರೀಸಿದರಾಯ ದೇವಸ್ಥಾನದ ಮುಂಭಾಗದಲ್ಲಿ 56 ಅಡಿ ಎತ್ತರದ ಮಾಲಗಂಬ ನಿರ್ಮಾಣ ಕಾಮಗಾರಿ ಗ್ರಾಮಸ್ಥರ ತನುಮನ-ಧನದ ಸಹಕಾರದಿಂದ ನಡೆಯುತ್ತಿದ್ದು, ಇದುವರೆಗೆ ಸುಮಾರು 46 ಅಡಿ ಎತ್ತರದ ಭಾಗ ಪೂರ್ಣಗೊಂಡಿತ್ತು. ಆದರೆ ಏಕಾಏಕಿ ಬೀಸಿದ ಬಿರುಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಗಾತ್ರದ ಮಾಲಗಂಬದ ರಚನೆ ಕುಸಿದು ನೆಲಸಮವಾಗಿದೆ. ಘಟನೆಯಿಂದ ಸ್ಥಳದಲ್ಲಿ ಕಲ್ಲು, ನಿರ್ಮಾಣ ಸಾಮಗ್ರಿಗಳು ಹಾಗೂ ಮಾಲಗಂಬದ ಅವಶೇಷಗಳು ಚದುರಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.ಮಾಲಗಂಬ ನಿರ್ಮಾಣಕ್ಕಾಗಿ ಯಾವುದೇ ಸಂಸ್ಥೆಯ ನೆರವಿಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಒಗ್ಗೂಡಿ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದರು.  

ಇದರಲ್ಲಿ ಈಗಾಗಲೇ ಸುಮಾರು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ 46 ಅಡಿ ಎತ್ತರದ ಕಾಮಗಾರಿ ಪೂರ್ಣಗೊಂಡಿತ್ತು. ಇದೀಗ ಈ ಪ್ರತಿಷ್ಠೆಯ ಮಾಲಗಂಬ ನೆಲಸಮಗೊಂಡಿರುವುದು ವಿಷಾಧನೀಯ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಘಟನೆ ಸಂಭವಿಸಿದ ವೇಳೆ ದೇವಸ್ಥಾನದ ಟ್ರಸ್ಟ್‌ ಕಮಿಟಿ ಭವನದ ಎರಡು ಕೋಣೆಗಳ ಮೇಲೆ ಕಲ್ಲು ಬಂಡೆಗಳು ಉರುಳಿದ್ದು, ಅದೃಷ್ಟವಶಾತ್ ಒಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೂ ಈ ಘಟನೆ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡಿದ್ದು, ಇಂತಹ ದೊಡ್ಡ ಮಟ್ಟದ ಕಾಮಗಾರಿಗಳ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ಈ ಕಾಮಗಾರಿಯಲ್ಲಿ ತಾಂತ್ರಿಕ ದೋಷಗಳಿವೆಯೇ, ಗಾಳಿ-ಮಳೆಗೆ ತಡೆದುಕೊಳ್ಳುವ ರೀತಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.  ಗ್ರಾಮಸ್ಥರಲ್ಲಿ ಭಯದ ವಾತಾವರಣಶಿರಗೂರ ಗ್ರಾಮದಲ್ಲಿ ಇದುವರೆಗೂ ಇಂತಹ ಘಟನೆ ಸಂಭವಿಸಿರಲಿಲ್ಲ. ಶ್ರೀ ಸಿದರಾಯ ದೇವಾಲಯವು ಗ್ರಾಮದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಎಲ್ಲ ಸಮುದಾಯದ ಜನರು ಸಮಾನವಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಈ ಘಟನೆಯ ಬಳಿಕ ಗ್ರಾಮದಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.