ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗ ನಿರ್ಮಾಣ

Construction of new railway line Gangavati-Bagalakot

ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗ ನಿರ್ಮಾಣ

ಗಂಗಾವತಿ 23: ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ರೈಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ 31.30 ಕಿ.ಮಿ.ಬ್ರಾಡ್ ಗೇಜ್ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ರೂ.919.49 ಕೋಟಿ ಹಣ ಮತ್ತು ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗದ ಅಂದಾಜು ಮೊತ್ತದಲ್ಲಿ ಕೇಂದ್ರ ಸರಕಾರದ ಪಾಲನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಹಿಂದಿನ ನಿರ್ದೇಶಕ ಅಶೋಕಸ್ವಾಮಿ ಹೇರೂರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರಿಗೆ ಮನವಿ ಮಾಡಿದ್ದಾರೆ.ಸಧ್ಯ ಗಂಗಾವತಿ ನಗರದಿಂದ ಬಳ್ಳಾರಿ ನಗರಕ್ಕೆ ರಸ್ತೆ ಮಾರ್ಗವಾಗಿ ಕೇವಲ 60 ಕಿ.ಮಿ.ಅಂತರವಿದ್ದು ರೇಲ್ವೇ ಮಾರ್ಗದ ಮೂಲಕ ಬಳ್ಳಾರಿ ತಲುಪಬೇಕಾದರೆ, ಗಂಗಾವತಿಯಿಂದ ಗಿಣಿಗೇರಾ ರೈಲ್ವೆ ನಿಲ್ದಾಣಕ್ಕೆ ವಿರುದ್ಧ ಧಿಕ್ಕಿನಲ್ಲಿ (28.ಕಿ.ಮಿ.) ತಲುಪಿ, ಅಲ್ಲಿ ಇಂಜಿನ್ ಬದಲಿಸಿ, ಅಲ್ಲಿಂದ ಹೊಸಪೇಟೆ ಮಾರ್ಗವಾಗಿ ದರೋಜಿ ರೈಲ್ವೆ ನಿಲ್ದಾಣ ತಲುಪಬೇಕು (64 ಕಿ.ಮಿ.) ಅಲ್ಲಿಂದ ಬಳ್ಳಾರಿ (27ಕಿ.ಮಿ.) ಇದರಿಂದ ಒಟ್ಟು 119 ಕಿ.ಮಿ.ಅಂತರವನ್ನು ಕ್ರಮಿಸಿ ಬಳ್ಳಾರಿ ನಗರವನ್ನು ತಲುಪಬೇಕಾಗುತ್ತದೆ. ಇದರಿಂದ ಇಂಧನ ಮತ್ತು ಸಮಯದ ವ್ಯಯವಾಗುತ್ತಿದೆ.ಪ್ರಯಾಣ ಮತ್ತು ಸರಕು ಸಾಗಾಟದ ವೆಚ್ಚ ಹೆಚ್ಚಾಗುತ್ತಿದೆ.ಈಗ ಸಂಚರಿಸುತ್ತಿರುವ ಸಿಂಧನೂರು-ಬೆಂಗಳೂರು ರೈಲ್ವೆ ಇದೇ ಮಾರ್ಗದಲ್ಲಿ (ಸಿಂಧನೂರು-ಗಂಗಾವತಿ-ಗಿಣಿಗೇರಾ-ಹೊಸಪೇಟೆ- ಬಳ್ಳಾರಿ ಮಾರ್ಗ) ಸಂಚರಿಸುತ್ತಿದೆ.ಇದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ಹಿಡಿಯುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. 

 ಹಾಗೂ ಸರಕು ಸಾಗಾಟಕ್ಕೂ ಅಡಚಣೆಯಾಗಿದೆ.ಉದ್ದೇಶಿತ ಗಂಗಾವತಿ-ದರೋಜಿ ರೈಲ್ವೆ ಲೈನ್ ನಿರ್ಮಾಣವಾದರೆ,ಗಂಗಾವತಿ ನಗರದಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.ಇದರಿಂದ ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಹಾಗೂ ಗುಂತಕಲ್ ರೈಲ್ವೆ ಜಂಕ್ಷನ್ ತಲುಪಲು ಸರಳ ಸಾಧ್ಯವಾಗುತ್ತದೆ.ಗಂಗಾವತಿ ತಾಲೂಕು (ಕೊಪ್ಪಳ ಜಿಲ್ಲೆ) ಮತ್ತು ಸಿಂಧನೂರು ತಾಲೂಕಿನಲ್ಲಿ (ರಾಯಚೂರು ಜಿಲ್ಲೆ) ಅತಿ ಹೆಚ್ಚು ಭತ್ತ ಬೆಳೆಯುವುದರಿಂದ ಅಕ್ಕಿಯನ್ನು ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ರವಾನಿಸಲು ಸರಳವಾಗುತ್ತದೆ.ಭತ್ತದ ಕೊಯ್ಲು ಯಂತ್ರಗಳನ್ನು ಸಾಗಿಸಲು ಮತ್ತು ತರಿಸಿಕೊಳ್ಳಲು ಅನುಕೂಲವಾಗುತ್ತದೆ. 

ಇದೇ ರೀತಿ ಭತ್ತ ಬೆಳೆಯಲು ಬೇಕಾದ ಗೊಬ್ಬರ ಹಾಗೂ ಕ್ರಿಮಿನಾಶಕಗಳ ವಹಿವಾಟಿಗೆ ಸಹಾಯವಾಗುತ್ತದೆ. ಸಿಮೆಂಟ್,ಕಬ್ಬಿಣ ಸೇರಿದಂತೆ ಇತರ ಸಾಮಗ್ರಿಗಳನ್ನು ತರಿಸಿಕೊಳ್ಳಲು ಸರಳವಾಗುತ್ತದೆ. ಇಡೀ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯ ಟ್ರಾಕ್ಟರ್ ಮತ್ತು ಆಟೋಮೊಬೈಲ್ ಗಳನ್ನು ಹೊಂದಿರುವ ಎರಡನೆಯ ಪ್ರಮುಖ ಸ್ಥಳವಾದ ಸಿಂಧನೂರು ಭಾಗಕ್ಕೆ ಟ್ಯಾಕ್ಟರ್ ಹಾಗೂ ಆಟೊಮೊಬೈಲ್ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಅನುಕೂಲವಾಗುತ್ತದೆ.ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲ್ವೆ ಲೈನ್ ಮಾರ್ಗದಿಂದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರಾಶಸ್ತ್ರ ಕೊಟ್ಟಂತಾಗುತ್ತದೆ. ಆದ್ದರಿಂದ ದಯವಿಟ್ಟು ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲ್ವೆ ಲೈನ್ ನಿರ್ಮಾಣಕ್ಕಾಗಿ ಮತ್ತು ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ತೀವ್ರ ಒತ್ತು ಕೊಟ್ಟು ಕಾಮಗಾರಿಗೆ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.