ರಾಜ್ಯವನ್ನು ಕಾಂಗ್ರೇಸ್ ಸರಕಾರ ಆತಂಕದ ಸ್ಥಿತಿಗೆ ತಳ್ಳುತ್ತಿದೆ: ಕುಮಠಳ್ಳಿ

ಅಥಣಿ 04: ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಇಂದು ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ  ವಕ್ಫ ಬೋರ್ಡ ಮಂಡಳಿಯ ಮೂಲಕ ಆತಂಕದ ಸ್ಥಿತಿಗೆ ತಳ್ಳುತ್ತಿದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.  

ಅವರು ಅಥಣಿ ತಾಲೂಕಾ ಬಿಜೆಪಿ ಘಟಕ ವಕ್ಫ ರದ್ದು ಮಾಡಬೇಕು ಎಂದು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.      ವಕ್ಷ ಬೋರ್ಡ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಹಾಗೂ ದೇಶದ ಬೆನ್ನೆಲುಬಾದ ರೈತರ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದ ಅವರು ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲಾ ಕೃತ್ಯಗಳಿಗೆ ಕಾಂಗ್ರೇಸ್ ಸರ್ಕಾರ ಹಾಗೂ ಸಚಿವ ಜಮೀರ ಅಹ್ಮದ ನೇರವಾಗಿ ಕುಮ್ಮಕ್ಕು ಕೋಡುತ್ತಿದ್ದಾರೆ ಎಂದು ಆರೋಪಿಸಿದರು.       

ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ತಹಶೀಲದಾರ ಮುಖಾಂತರ ವಕ್ಸ್‌ ಆಸ್ತಿ ಎಂದು ನೋಟಿಸ್ ನೀಡಿರುತ್ತಾರೆ. ಇದು ರೈತರ ಭಾವನೆಗಳ ಮೇಲೆ ಬರೆ ಇಟ್ಟಂತಿದೆ ಎಂದ ಅವರು ರಾಜ್ಯದಲ್ಲಿ ವಕ್ಫ ಬೋರ್ಡನಿಂದ ಆಗುತ್ತಿರುವ ಈ ರೀತಿಯ ಗೊಂದಲಗಳು ರಾಜ್ಯದಲ್ಲಿ ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದ್ದು, ತಕ್ಷಣ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಕಾಂಗ್ರೇಸ್ ಸರ್ಕಾರ ಮುಸ್ಲಿಂ ರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ವಕ್ಷ ಬೋರ್ಡ ಪರವಾಗಿ ನಿಂತಿದೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆ ಎಂದ ಅವರು ಇದೇ ತೆರನಾದ ನಿಲುವುಗಳನ್ನು ಮುಂದುವರೆಸಿದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೇಸ್ ಸರ್ಕಾರವೇ ನೇರವಾಗಿ ಹೋಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ರಾಜ್ಯದ ಹಿತಕ್ಕೆ, ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ಯಾವುದೇ ನಿರ್ಧಾರವನ್ನು ಕಾಂಗ್ರೇಸ್ ಕೈಗೊಳ್ಳುವ ಮತ್ತು ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುವ ತನ್ನ ಕೈಚಾಳಿಯನ್ನು ಬಿಡಬೇಕೆಂದು ಆಗ್ರಹಿಸಿದರು.       

ಪ್ರತಿಭಟನಾ ಮೆರವಣಿಗೆ ನಂತರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ  ಅಥಣಿ ಮಂಡಲ ಅಧ್ಯಕ್ಷ ಡಾ.ರವಿ ಸಂಕ, ಬಿಜೆಪಿ ಧುರೀಣರಾದ ಉಮೇಶ ಬಂಟೋಡಕರ, ಗೀರೀಶ ಬುಟಾಳಿ, ಪ್ರಭಾಕರ ಚವ್ಹಾಣ, ಪುಟ್ಟು ಹಿರೇಮಠ, ಶಿವಾನಂದ ಐಗಳಿ, ಮಲ್ಲಿಕಾರ್ಜುನ ಅಂದಾನಿ, ಸಂಪತ್ತಕುಮಾರ ಶೆಟ್ಟಿ, ಮಲ್ಲಪ್ಪ ಹಂಚಿನಾಳ, ಕುಮಾರ ಪಡಸಲಗಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.