ದೇವಸ್ಥಾನ ಅಪವಿತ್ರೀಕರಣ ಕೃತ್ಯಕ್ಕೆ ಖಂಡನೆ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಸೌಹಾರ್ದತೆ ಉಳಿಯಲಿ

ದೇವಸ್ಥಾನ ಅಪವಿತ್ರೀಕರಣ ಕೃತ್ಯಕ್ಕೆ ಖಂಡನೆ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಸೌಹಾರ್ದತೆ ಉಳಿಯಲಿ  Condemnation of temple desecration: Let the guilty be punished and harmony preserved


ಶಿಗ್ಗಾವಿ, ಆ.25: ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದ ಅಪವಿತ್ರೀಕರಣದ ಘಟನೆಗೆ ಶಿಗ್ಗಾವಿ ಅಂಜುಮನ್ ಇಸ್ಲಾಂ ಸಂಸ್ಥೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಘಟನೆಯಿಂದ ಹಿಂದೂ ಬಾಂಧವರಿಗೆ ಉಂಟಾದ ನೋವಿಗೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.  

ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮೌಲಾಲಿ ದೊಡ್ಡಮನಿ, ದೇವಸ್ಥಾನದಲ್ಲಿ ನಡೆದ ಘಟನೆ ನೋವುಂಟುಮಾಡಿದ್ದು, ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನುಬದ್ಧ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಯಾವುದೇ ಧರ್ಮದ ಆರಾಧನಾ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಅಕ್ಷಮ್ಯ ಅಪರಾಧವಾಗಿದ್ದು, ಕೃತ್ಯ ಎಸಗಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಬೇಕು ಎಂದರು.  

ಸಂಸ್ಥೆಯ ಸದಸ್ಯ ಸಲೀಂ ಅಹ್ಮದ್ ಫರೋಗಿ ಮಾತನಾಡಿ, ದೇವಸ್ಥಾನದಲ್ಲಿ ನಡೆದ ಘಟನೆ ಹಿಂದೂ ಸಮಾಜಕ್ಕೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಹಿರಿಯರು ಹಾಗೂ ಯುವಕರಿಗೂ ನೋವುಂಟುಮಾಡಿದೆ.

ಹಿಂದೂ ಸಹೋದರರ ನೋವಿನಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ಭಾಗಿಯಾಗಿದ್ದು, ನ್ಯಾಯಕ್ಕಾಗಿ ನಡೆಯುವ ಪ್ರತಿಯೊಂದು ಕಾನೂನುಬದ್ಧ ಕ್ರಮಕ್ಕೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.  

ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಶಿಗ್ಗಾವಿಯಲ್ಲಿ ಬಹುಕಾಲದಿಂದ ನೆಲೆಸಿರುವ ಹಿಂದೂ-ಮುಸ್ಲಿಂ ಬಾಂಧವ್ಯ ಮತ್ತು ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಸಂಸ್ಥೆ ಮನವಿ ಮಾಡಿತು.  

ಆ.26ರಂದು ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ ನಡೆಯಲಿರುವ ಈದ್ ಮಿಲಾದ್ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು, ಹಿರಿಯರು ಹಾಗೂ ಯುವಕರು ಪ್ರತಿವರ್ಷದಂತೆ ಭಾಗವಹಿಸಿ ಸಹಕರಿಸಬೇಕು ಎಂದು ಸಂಸ್ಥೆ ಕೋರಿದೆ.  

ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಮುಂಬರುವ ಈದ್ ಮಿಲಾದ್ ಕಾರ್ಯಕ್ರಮಕ್ಕೂ ಆಗಮಿಸಿ ಸೌಹಾರ್ದತೆಯ ಸಂಕೇತವಾಗಿ ನಮ್ಮೊಂದಿಗೆ ನಿಲ್ಲಬೇಕು ಎಂಬುದು ಸಂಸ್ಥೆಯ ಪದಾಧಿಕಾರಿಗಳ ಆಶಯವಾಗಿದೆ.  

ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವೇ ಶಿಗ್ಗಾವಿಯ ನಿಜವಾದ ಶಕ್ತಿ. ಪ್ರತಿಯೊಂದು ಧರ್ಮದ ಪವಿತ್ರ ಸ್ಥಳಗಳ ಗೌರವವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.  

ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಖಾಜಾ ಚೂಡಿಗಾರ, ಅಬ್ದುಲ್ ತುಕರಿ, ಸಾಧಿಕ್ ಸವಣೂರು, ಖಾಜಾ ಶ್ಯಾಬಾಳ, ಮಹ್ಮದ್ಹನೀಫ್ ಅಂಬೂರ, ಇಮ್ತಿಯಾಜ್ ಅಹ್ಮದ್ ಮುಲ್ಲಾ, ಶಕೀರ್ ಅಹ್ಮದ್ ಬೇಪಾರಿ, ಅತಾವುಲ್ಲಾಖಾನ್ ಖಾಜೆಕಾನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.