ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರಗಳನ್ನು ಕಲಸಿ: ನಾವದಗಿ ಶ್ರೀ

ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರಗಳನ್ನು ಕಲಸಿ: ನಾವದಗಿ ಶ್ರೀ  Combine good morals with education: Navadagi Sri

ಲೋಕದರ್ಶನ ವರದಿ 

ತಾಳಿಕೋಟಿ  28: ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಶ್ರಮಿಸುತ್ತಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಈ ಭಾಗದಲ್ಲಿ ಶೈಕ್ಷಣಿಕ ಕಾಂತಿಯನ್ನು ತರುತ್ತಿದೆ ಎಂದು ನಾವದಗಿ ಬೃಹನ್ಮಠದ ಷ.ಬ್ರ. ಶ್ರೀ ರಾಜ ಗುರುರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಬೇಲೂರ ಕ್ರಾಸ್ ಕೊಡಗಾನೂರದ ಜೆಎಸ್‌ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2025-26 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಹಾಗೂ ವಿವಿಧ ಸ್ಪರ್ಧಾತ್ಮಕ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಸಂಸ್ಥೆಯ ವಿದ್ಯಾರ್ಥಿನಿ ಸೌಪರ್ಣಿಕಾ ಪಾಟೀಲ ರಾಜ್ಯಕ್ಕೆ 3 ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಇದಕ್ಕೆ ಈ ಸಂಸ್ಥೆಯ ಕಾರ್ಯದರ್ಶಿ ಸಾಹೇಬಗೌಡರ ಕಳಕಳಿ ಹಾಗೂ ಶಿಕ್ಷಕರ ಪರಿಶ್ರಮ ಕಾರಣವಾಗಿದೆ ಅವರನ್ನು ನಾನು ಅಭಿನಂದಿಸುತ್ತೇನೆ. 

 ಮಕ್ಕಳಿಗೆ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರಗಳನ್ನೂ ಕಲಿಸಿ. ಅವರು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಿ, ಅವರ ಕುರಿತು ಹೆಚ್ಚು ಕಾಳಜಿ ವಹಿಸುವ ಅಗತ್ಯ ಪಾಲಕರಿಗೆ ಇದೆ ಎಂದರು. ಜೆಎಸ್‌ಎಸ್ ಕನ್ನಡ ಮಾಧ್ಯಮ ಮುಖ್ಯ ಗುರುಗಳಾದ ವಿನಾಯಕ ಪಟಗಾರ ಹಾಗೂ ಶಶಿಕಾಂತ ಮೂಕಿಹಾಳ ಸಂಸ್ಥೆಯ ಸಾಧನೆ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯದರ್ಶಿ ಸಾಹೇಬಗೌಡ ಗಬಸಾವಳಗಿ ಅವರು ಮಕ್ಕಳ ಈ ಸಾಧನೆಗೆ ಸಂಸ್ಥೆಯ ಶಿಕ್ಷಕರ ಪರಿಶ್ರಮ ಹಾಗೂ ಮಕ್ಕಳ ಕಲಿಕಾ ಆಸಕ್ತಿಯೇ ಕಾರಣವಾಗಿದೆ ಅವರನ್ನು ನಾನು ಅಭಿನಂದಿಸುತ್ತೇನೆ. ಸಾಧನೆ ಎಂಬುದು ಯಾರ ಸ್ವತ್ತು ಅಲ್ಲ ಕಠಿಣ ಪರಿಶ್ರಮದಿಂದ ಎಂತಹ ಸಾಧನೆಯನ್ನಾದರೂ ಮಾಡಬಹುದು ಭವಿಷ್ಯದಲ್ಲಿಯೂ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ ಎಂದರು.

ಇದೇ ಸಂದರ್ಭದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಸಾಧನೆಗೈದ ಹಾಗೂ ನವೋದಯ, ಸೈನಿಕ ಮತ್ತು ಸ್ಪರ್ಧಾತ್ಮಕ ವಸತಿ ಶಾಲೆಗಳಿಗೆ ಆಯ್ಕೆಯಾದ ಜೆಎಸ್‌ಎಸ್ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಮುಖ್ಯಸ್ಥರಿಗೆ, ಶಿಕ್ಷಕ ವರ್ಗಕ್ಕೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ದನಗೌಡ ಗಬಸಾವಳಗಿ, ಕೊಡಗಾನೂರ ಕ್ಲಸ್ಟರ್ ಸಿ ಆರ್ ಸಿ ಸಂಗಮೇಶ ಎಂ.ಪಾಲ್ಕಿ, ಮುಖ್ಯ ಗುರುಮಾತೆ ವಿಜಯಲಕ್ಷ್ಮಿ ಸಾಹೇಬಗೌಡ ಗಬಸಾವಳಗಿ, ಪ್ರಕಾಶ ನಾಯಕ್, ರೇವಣಸಿದ್ದಪ್ಪ ಬಿ.ಗುಗ್ರಿ, ಮಾದೇವ ತಳವಾರ, ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.