ಬಸ್ ಹಾಗೂ ಅಪರಿಚಿತ ವಾಹನ ಡಿಕ್ಕಿ: ಇಬ್ಬರಿಗೆ ಗಾಯ

ಬಸ್ ಹಾಗೂ ಅಪರಿಚಿತ ವಾಹನ ಡಿಕ್ಕಿ: ಇಬ್ಬರಿಗೆ ಗಾಯ  Collision between bus and unidentified vehicle: Two injured


ಸವದತ್ತಿ, ಸೆ.20: ತಾಲೂಕಿನ ಹಿರೇಬಳ್ಳಿಗೇರಿ ಸಮೀಪ ಕೆಎಸ್‌ಆರ್ಟಿಸಿ ಬಸ್ ಹಾಗೂ ಅಪರಿಚಿತ ವಾಹನದ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.  

ಧಾರವಾಡದಿಂದ ಅಥಣಿ ಕಡೆಗೆ ಸವದತ್ತಿ ಮಾರ್ಗವಾಗಿ ತೆರಳುತ್ತಿದ್ದ ಕೆಎ-23 ಎಫ್‌-0813 ಸಂಖ್ಯೆಯ ಕೆಎಸ್‌ಆರ್ಟಿಸಿ ಬಸ್ನ್ನು ಚಾಲಕ ಮಲ್ಲಿಕಾರ್ಜುನ ಶ್ರೀಶೈಲ ಹಂಜಗಿ ಚಲಾಯಿಸುತ್ತಿದ್ದರು. ಹಿರೇಬಳ್ಳಿಗೇರಿ ದಾಟಿದ ಬಳಿಕ ಸುಮಾರು ಒಂದು ಕಿ.ಮೀ. ದೂರದಲ್ಲಿ ಎದುರಿನಿಂದ ಬಂದ ಅಪರಿಚಿತ ವಾಹನವು ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಯಾವುದೇ ನಿಲುಗಡೆ ಮಾಡದೆ ಸ್ಥಳದಿಂದ ಪರಾರಿಯಾಗಿದೆ.  

ಡಿಕ್ಕಿಯ ಪರಿಣಾಮ ಬಸ್ನ ಹಿಂಭಾಗದ ಬಲಭಾಗದಲ್ಲಿ ಕುಳಿತಿದ್ದ ಸವದತ್ತಿ ಮೂಲದ ಸವಿತಾ ಲಗಮಣ್ಣವರ ಅವರಿಗೆ ತಲೆ, ಮುಖ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಅಸುಂಡಿ ಗ್ರಾಮದ ಮಹಾಂತೇಶ ಚುಂಚನೂರ ಅವರ ಮುಖಕ್ಕೂ ಗಾಯಗಳಾಗಿವೆ.  

ಅಪಘಾತ ಸಂಭವಿಸಿದ ಕೂಡಲೇ ಪ್ರವೀಣ್ ಎಂಬುವವರು 112 ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಂಬ್ಯುಲೆನ್ಸ್‌ ಮೂಲಕ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.