ಹವಾಮಾನ ವೈಪರೀತ್ಯ ಜನರ ಜೀವನಕ್ಕೆ ಕಂಟಕ: ಯೋಗೀಶ್ ಶಿವಾಚಾರ್ಯ
Climate change is a threat to people's lives: Yogish Shivacharya
ಲೋಕದರ್ಶನ ವರದಿ
ಬಳ್ಳಾರಿ: ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಕುರಿತ ತರಬೇತಿ ಕಾರ್ಯಾಗಾರ
ಬಳ್ಳಾರಿ 10: ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯವು ಜನರ ಜೀವನಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಲಿದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಅಭಿಪ್ರಾಯಪಟ್ಟರು.
ಹವಾಮಾನ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಜಂಟಿ ಸಹಯೋಗದಲ್ಲಿ ನಗರದ ಜಿಪಂ ಹಳೆಯ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ “ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಕ್ರಿಯಾ ಯೋಜನೆ” ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲೂ ಹವಾಮಾನ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕೆಲವೆಡೆ ಅತಿವೃಷ್ಟಿ ಉಂಟಾಗುತ್ತಿದ್ದರೆ, ಇನ್ನು ಕೆಲವು ಕಡೆ ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿವೆ. ಇದು ನೇರವಾಗಿ ರೈತರ ಜೀವನೋಪಾಯ ಹಾಗೂ ಆಹಾರ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆ ಹೇಗಿದೆ, ಮುಂದಿನ ದಿನಗಳಲ್ಲಿ ಏನನ್ನು ನೀರೀಕ್ಷಿಸಬಹುದು ಮತ್ತು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಈಗಾಗಲೇ ಒಂದು ಸಮಗ್ರ ಕ್ರಿಯಾ ಯೋಜನೆ ಸಿದ್ಧವಾಗಿದೆ. ಹವಮಾನ ಬದಲಾವಣೆಯ ವಲಯವಾರು ನೀತಿಗಳು ಮತ್ತು ಅದರ ಅನುಷ್ಠಾನದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೂಪಿಸಿರುವ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಇಂತಹ ಉಪಯುಕ್ತ ತರಬೇತಿಯನ್ನು ಆಯೋಜಿಸಿದ ‘ಎಂಪ್ರಿ’ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಇಲಾಖೆಗಳಲ್ಲಿ ಜಾರಿಗೊಳಿಸಬೇಕು ಎಂದು ಕರೆ ನೀಡಿದರು.
ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ಡಾ.ಶೃತಿ ಬಿ.ವಿ ಅವರು ಮಾತನಾಡಿ, ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ‘ಎಂಪ್ರಿ’ ಸಿದ್ಧಪಡಿಸಿದ ಈ ಕ್ರಿಯಾ ಯೋಜನೆಗೆ 2024ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಡಿ 2025-2030ರ ಅವಧಿಗೆ ವಿವಿಧ ಇಲಾಖೆಗಳು ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು ನಿಗದಿಪಡಿಸಿಕೊಂಡಿವೆ. ಈ ಗುರಿಗಳನ್ನು ತಲುಪಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಕಳೆದ ವರ್ಷ 22 ಜಿಲ್ಲೆಗಳಲ್ಲಿ ತರಬೇತಿ ನೀಡಲಾಗಿತ್ತು. ಈ ಬಾರಿ (2026-27ನೇ ಸಾಲಿನಲ್ಲಿ) ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ’ಯ ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ, ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಹಾಗೂ ಜಿಲ್ಲಾಮಟ್ಟದ ದತ್ತಾಂಶಗಳ ಕುರಿತು ಸಮಗ್ರ ಉಪನ್ಯಾಸ ನೀಡಿದರು.
ಎಸಿಐಡಬ್ಲ್ಯುಆರ್‌ಎಂ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ದೀಪಾ ರಾಣಿ ಅವರು, ಜಲ ಸಂಪನ್ಮೂಲ ವಲಯಕ್ಕೆ ಸಂಬಂಧಿಸಿದ ಹವಾಮಾನ ಕ್ರಿಯಾ ಯೋಜನೆ ಮತ್ತು ಕಾರ್ಯಕ್ರಮದ ಯಶಸ್ವಿ ಆಯೋಜನೆಯ ಕುರಿತು ವಿಸ್ತೃತ ಮಾಹಿತಿ ಹಂಚಿಕೊಂಡರು. ಜಿಲ್ಲಾ ಪಂಚಾಯತ್‌ನ ಎನ್‌ಆರ್‌ಡಿಎಂಎಸ್ ಅಧಿಕಾರಿ ರಾಮಚಂದ್ರ ರೆಡ್ಡಿ ಅವರು ತಮ್ಮ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಾಗಾರದ ಯೋಜನೆ, ಸಮನ್ವಯ ಮತ್ತು ನಿರ್ವಹಣೆಯನ್ನು ಎಂಪ್ರಿ ಸಂಸ್ಥೆಯ ತರಬೇತಿ ಅಸೋಸಿಯೇಟ್ ರುಚಿತಾ ಶ್ರೀ ಹಾಗೂ ತರಬೇತಿ ಸಹಾಯಕ ರಾಘವೇಂದ್ರ ಎನ್. ಅವರು ನೆರವೇರಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 