ಸರ್ಕಾರಿ ಜಾಗ ಒತ್ತುವರಿ ತೆರವು: ಜಿಲ್ಲಾಡಳಿತದಿಂದ ದಿಟ್ಟ ಕ್ರಮ

ಸರ್ಕಾರಿ ಜಾಗ ಒತ್ತುವರಿ ತೆರವು: ಜಿಲ್ಲಾಡಳಿತದಿಂದ ದಿಟ್ಟ ಕ್ರಮ Clearance of encroachment on government land: Bold action by the district administration

ಲೋಕದರ್ಶನ ವರದಿ  

        ಬಳ್ಳಾರಿ 16:  ನಗರದ ವಿವಿಧೆಡೆ ಹಲವು ವರ್ಷಗಳಿಂದ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಜಿಲ್ಲಾಡಳಿತವು ಕಾರ್ಯಾಚರಣೆಯ ಮೂಲಕ ಗುರುವಾರ ತೆರವುಗೊಳಿಸಿದೆ. ನಗರದ ಅವಂಭಾವಿಯ ದೇವಸ್ಥಾನದ ಹಿಂಭಾಗದಲ್ಲಿ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ್ದ ರಸ್ತೆ ಸೇರಿದಂತೆ 22 ಸೆಂಟ್ಸ್‌ ವಿಸ್ತೀರ್ಣದ ಸರ್ಕಾರಿ ಜಾಗ ಅಧಿಕಾರಿಗಳು ವಶಕ್ಕೆ ಪಡೆಯಲಾಯಿತು. ತೆರವುಗೊಳಿಸಿದ ಜಾಗಕ್ಕೆ ಅಳವಡಿಸಿ ‘ಸರ್ಕಾರಿ ಸ್ವತ್ತು' ಎಂಬ ನಾಮಫಲಕ ಹಾಕಲಾಯಿತು. ಮುಂಜಾನೆಯೇ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜೆಸಿಬಿ ಯಂತ್ರಗಳ ಮೂಲಕ ನೆಲಸಮ ಮಾಡಿದರು. 

ಬಳಿಕ ನಲ್ಲಚೇರುವು ಪ್ರದೇಶದಲ್ಲಿ ಒತ್ತುವರಿಯಾಗಿದ್ದ 5.5 ಎಕರೆ ಜಮೀನು ಸರ್ಕಾರದ ಸ್ವತ್ತು ಎಂದು ನಾಮಫಲಕ ನೆಡಲಾಯಿತು. ನಂತರ ಭತ್ರಿ ಕಾಲೋನಿಯ ಈಶ್ವರ ದೇವಸ್ಥಾನದ ಬಳಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಮತ್ತು ಮನೆ ತೆರವು ಕಾರ್ಯಾಚರಣೆ ಮಾಡಲಾಯಿತು. ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್‌.ಎನ್‌., ಸಹಾಯಕ ಆಯುಕ್ತ ರಾಜೇಶ್ ಹೆಚ್‌.ಡಿ., ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ಡಿಡಿಎಲ್‌ಆರ್, ಎಡಿಎಲ್‌ಆರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.