ನಾಲೆ, ಕಂದಕಗಳನ್ನು ತ್ವರಿತವಾಗಿ ಶುಚಿಗೊಳಿಸಿ: ಜಿಲ್ಲಾಧಿಕಾರಿ ಡಾ. ಆನಂದ.ಕೆ

ನಾಲೆ, ಕಂದಕಗಳನ್ನು ತ್ವರಿತವಾಗಿ ಶುಚಿಗೊಳಿಸಿ: ಜಿಲ್ಲಾಧಿಕಾರಿ ಡಾ. ಆನಂದ.ಕೆ Clean drains and ditches quickly: District Collector Dr. Anand.K.

ಲೋಕದರ್ಶನ ವರದಿ 

ನಗರದ ನಾಲೆ, ತಗ್ಗು ಪ್ರದೇಶ ಪರೀಶೀಲಿಸಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ 

ವಿಜಯಪುರ,ಮೇ.27 :ಮುಂಗಾರು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಪರೀಶೀಲನೆಗಾಗಿ ಜಿಲ್ಲಾಧಿಕಾರಿಗಳಾದ ಡಾ. ಕೆ. ಆನಂದ ಅವರು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ನಾಲೆಗಳು ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಬುಧವಾರ ಪರೀಶೀಲನೆ ನಡೆಸಿದರು. 

ನಗರದ ನವಬಾಗ್ ರಸ್ತೆ, ಜನ್ನಥ್ ಫಂಕ್ಷನ್ ಹಾಲ್ ಸಮೀಪದ ಕೋಟೆಗೋಡೆ ಕಂದಕ, ರಾಮನಗರ ರಸ್ತೆ, ಕಸ್ತೂರಿ ಕಾಲೊನಿ ಕೋಟೆಗೋಡೆ ಕಂದಕ ಹಾಗೂ ರೂಡಗಿ ಮಡ್ಡಿ ಸ್ಮಶಾನ ಸಮೀಪ ಎಸ್ ಡಿಎಂಎಫ್ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಂದಕ ಹೂಳೆತ್ತುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಪರೀಶೀಲಿಸಿದರು. 

ಪರೀಶೀಲನೆ ವೇಳೆ ಮುಂಬರುವ ಮಳೆಗಾಲದ ಹಿನ್ನಲೆಯಲ್ಲಿ ನಗರದಲ್ಲಿನ ಎಲ್ಲ ಮಳೆ ನೀರು ಹರಿವಿನ ಚರಂಡಿಗಳು,ನಾಲೆಗಳು ಹಾಗೂ ಕೋಟೆಗೋಡೆ ಕಂದಕಗಳನ್ನು ಸಮಗ್ರ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಸೂಚಿಸಿದರು. ಅದರೊಂದಿಗೆ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಜೆಸಿಬಿ ಯಂತ್ರಗಳು, ಡೀ-ವಾಟರಿಂಗ್ ಪಂಪ್ ಗಳು, ಅಗತ್ಯ ಉಪಕರಣಗಳು ಹಾಗೂ ಸಿಬ್ಬಂದಿಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ನಗರದಲ್ಲಿ ಗುರುತಿಸಲಾದ ತಗ್ಗು ಪ್ರದೇಶಗಳಲ್ಲಿ ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯ ನಿರ್ವಹಿಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು. 

ಎಂ.ಜಿ.ಎನ್‌.ವಿ.ವೈ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಿ, ವಿಶೇಷವಾಗಿ ಮಳೆ ನೀರು ಹರಿವಿನ ಚರಂಡಿ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಳೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿಟ್ಟುಕೊಂಡು ಪ್ರದೇಶವಾರು ಪರೀಶೀಲನೆ ನಡೆಸುವಂತೆಯೂ ಸೂಚಿಸಿದರು. 

ಈ ಸಂದರ್ಭದಲ್ಲಿ ಆಯಾ ವಾರ್ಡ್‌ ಸದಸ್ಯರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ,ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆಯ ಇತರ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.