ಜೆರುಸಲೇಮ್‌ನಲ್ಲಿ ಇಸ್ರೇಲ್‌ ಸೈನಿಕರೊಂದಿಗೆ ಘರ್ಷಣೆ; 12 ಪ್ಯಾಲೆಸ್ತೀನಿಯನ್ನರಿಗೆ ಗಾಯ

ಗಾಜಾ, ಜನವರಿ 29,ಜೆರುಸಲೇಮ್‌ನ ಹೊರವಲಯದಲ್ಲಿ ಇಸ್ರೇಲ್ ಸಶಸ್ತ್ರ  ಪಡೆಗಳೊಂದಿಗೆ ಉಂಟಾದ ಘರ್ಷಣೆಯಲ್ಲಿ ಹನ್ನೆರಡು ಪ್ಯಾಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ  ಎಂದು ಪ್ಯಾಲೆಸ್ತೀನ್‌ ರೆಡ್ ಕ್ರೆಸೆಂಟ್ ವಕ್ತಾರ ಎರಾಬ್ ಅಲ್ ಫುಕಾಹಾ "ಸ್ಪುಟ್ನಿಕ್‌"ಗೆ ತಿಳಿಸಿದ್ದಾರೆ."ಜೆರುಸಲೇಮ್‌ನ  ಅಲ್-ಐಜಾರಿಯಾ ಪ್ರದೇಶದಲ್ಲಿ ಇಸ್ರೇಲಿ ಸೈನಿಕರೊಂದಿಗೆ ಉಂಟಾದ ಘರ್ಷಣೆಯ ಸಂದರ್ಭದಲ್ಲಿ ಸಿಡಿಸಿದ ಅಶ್ರುವಾಯುವಿನಿಂದ ಹನ್ನೆರಡು ಪ್ಯಾಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅಲ್ ಫುಕಾಹಾ ತಿಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಂಡಿಸಿದ ಅಮೆರಿಕ ಮಧ್ಯಪ್ರಾಚ್ಯ ಶಾಂತಿ  ಯೋಜನೆಯ ವಿರುದ್ಧ ಪ್ಯಾಲೆಸ್ತೀನಿಯನ್ನರು ನಡೆಸಿದ ಜಾಥಾದ ಸಂದರ್ಭದಲ್ಲಿ ಇಸ್ರೇಲ್ ಸಶಸ್ತ್ರ  ಪಡೆಗಳೊಂದಿಗೆ ಘರ್ಷಣೆಗಳು ಪಶ್ಚಿಮ ದಂಡೆಯಲ್ಲಿ ನಡೆದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು ಈ ಒಪ್ಪಂದವನ್ನು "ಶತಮಾನದ ಒಪ್ಪಂದ" ಎಂದು ಬಣ್ಣಸಿದ್ದಾರೆ. ಇದು ಇಸ್ರೇಲ್ ತನ್ನ ಹೆಚ್ಚಿನ ಅಕ್ರಮ ವಸಾಹತುಗಳನ್ನು ಉಳಿಸಿಕೊಳ್ಳಲು ಮತ್ತು ಜೆರುಸಲೆಮ್ ಅನ್ನು ತನ್ನ ಅವಿಭಜಿತ ರಾಜಧಾನಿಯಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಫ್ಯಾಲೆಸ್ತೀನಿಯನ್ನರು ಬಲವಾಗಿ ವಿರೋಧಿಸಿದ್ದಾರೆ.