ಮಹಾನ್ ಚೇತನ ಶರಣ ಅಂಬಿಗರ ಚೌಡಯ್ಯ ಜಯಂತಿ

ಮಹಾನ್ ಚೇತನ ಶರಣ ಅಂಬಿಗರ ಚೌಡಯ್ಯ ಜಯಂತಿ  Chowdayya Jayanti, the great spiritual leader

ಸವದತ್ತಿ  21 :  ತಮ್ಮ ವಚನಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಚೇತನ ಶರಣ ಅಂಬಿಗರ ಚೌಡಯ್ಯನವರು. ಅವರ ತತ್ವ, ಸಿದ್ಧಾಂತಗಳು ಆದರ್ಶನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲುಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಚೌಡಯ್ಯನವರ ನೇರ, ನಿಷ್ಠುರ ಮಾತುಗಳಿಂದಲೇ ನಿಜಶರಣ ಎಂದು ಬಿರುದು ಹೊಂದಿದ್ದರು.

ಸಂತರ, ಶರಣರ, ದಾರ್ಶನಿಕರ, ಮಹನೀಯರ ಜಯಂತಿ ಆಚರಣೆಗೆ ಸೀಮಿತವಾಗದೆ, ಅವರ ತತ್ವಾದರ್ಶ ಪಾಲಿಸಬೇಕು ಎಂದ ಅವರು, ನದಿಯ ದಡದಲ್ಲಿ ಅಂಬಿಗರ ಚೌಡಯ್ಯನವರ ದೇವಸ್ಥಾನ ನಿರ್ಮಿಸಿ ಕೊಡಬೇಕೆಂಬ ಸಮಾಜದ ಬೇಡಿಕೆಯಿದ್ದು, ಈ ಕುರಿತು ಅಧಿಕಾರಿಗಳೂಟ್ಟಿಗೆ ಚರ್ಚಿಸಿ ಸಮಾಜದ ಸಹಕಾರದೊಂದಿಗೆ ಸೂಕ್ತ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಕೊಡಲಾಗುವುದೆಂದು ಭರವಸೆ ನೀಡಿದರು.                 

 ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ನಾಡಿನ ಚರಿತ್ರೆಯಲ್ಲಿ 12ನೇ ಶತಮಾನಕ್ಕೆ ವಿಶೇಷ ಮಹತ್ವವಿದೆ. ಆ ಕಾಲಘಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯ ಭಾಗಿಯಾಗಿದ್ದರು. ಪ್ರತಿಯೊಬ್ಬರಿಗೆ ಶಿಕ್ಷಣ ನೀಡಬೇಕು. ದುಂದುವೆಚ್ಚದ ಬದಲು ಶಿಕ್ಷಣಕ್ಕಾಗಿ ಹಣ ವ್ಯಯಿಸಬೇಕು ಎಂಬುದು ಅವರ ವಚನಗಳ ತಾತ್ಪರ್ಯ ಎಂದರು.             ಸಮಾಜ ಮುಖಂಡ ಅನಿಲ ಸುಣಗಾರ ಮಾತನಾಡಿ, ಜ. 25 ರಂದು ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಜಯಂತಿ ಅಂಗವಾಗಿ ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಗುವುದು.

ಮೆರವಣಿಗೆಯೂ ಅಂದು ಬೆಳಿಗ್ಗೆ 10ಕ್ಕೆ ಕಲ್ಮಠದಿಂದ ಪ್ರಾರಂಭವಾಗಿ ಕಡಕೋಳ ಬ್ಯಾಂಕ್ ಸರ್ಕಲ್ ,ಆಣಿ ಅಗಸಿ, ಗಾಂಧಿ ಚೌಕ್, ಪೋಸ್ಟ್‌ ಆಫೀಸ್ ಸರ್ಕಲ್, ಪುರಸಭೆ ಮಾರ್ಗವಾಗಿ ಗುರುಭವನಕ್ಕೆ ಬಂದು ತಲುಪಲಿದೆ. ನಂತರ ಜಯಂತಿ ಕಾರ್ಯಕ್ರಮ ಜರುಗಲಿದೆ ಎಂದರು.ಈ ವೇಳೆ ಪುರಸಭೆ ಮುಖ್ಯಧಿಕಾರಿ ಸಂಗನಬಸಯ್ಯ, ಶಿರಸ್ತೆದಾರ ಶಶಿರಾಜ ವನಕಿ, ನ್ಯಾಯವಾದಿ ಎಫ್‌. ವಾಯ್‌. ಗಾಜಿ, ಪಶು ವೈದ್ಯಾಧಿಕಾರಿ ಡಾ.ಅನಿಲ ಮರಲಿಂಗನವರ, ಫಕ್ರುಸಾಬ ದೊಡಮನಿ, ಸುರೇಶ ಪೂಜೇರ, ಅಜ್ಜಪ್ಪ ಸುಣಗಾರ, ರಾಜು ಅಂಬಿಗೇರ, ಸೋಮನಿಂಗ ಬಾರ್ಕಿ, ರಾಜು ಪೂಜೇರ, ಫಕೀರ​‍್ಪ ಸಂಗಪ್ಪನವರ, ಸೋಮನಿಂಗ ಸಂಗಪ್ಪನವರ, ಪ್ರವೀಣ ರಾಮಪ್ಪನವರ ಸೇರಿ ಪ್ರಮುಖರು ಅಧಿಕಾರಿಗಳು ಉಪಸ್ಥಿತರಿದ್ದರು.