ಬೀಜಿಂಗ್, ಜ 29 : ಹೊಸ ಮಾರಣಾಂತಿಕ ಕರೋನ ವೈರಸ್ ನ ಕೇಂದ್ರಬಿಂದುವಾಗಿರುವ ವುಹಾನ್‌ನಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸುವಂತೆ ಒತ್ತಾಯಿಸುವ ದೇಶಗಳಿಗೆ ಅಗತ್ಯವಿರುವ ಎಲ್ಲ ಸಹಾಯ ನೀಡಲು ಚೀನಾ ಸಿದ್ಧವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಸ್ಪುಟ್ನಿಕ್‍ಗೆ ತಿಳಿಸಿದ್ದಾರೆ.
‘ವುಹಾನ್‌ನಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸುವಂತೆ ನಿರ್ದಿಷ್ಟವಾಗಿ ಒತ್ತಾಯಿಸುವ ದೇಶಗಳಿದ್ದರೆ, ಚೀನಾ ಸೂಕ್ತ ಸಿದ್ಧತೆಗಳನ್ನು ಕೈಗೊಳ್ಳುತ್ತದೆ. ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿರೋಧಕ ನಿಯಮಗಳಿಗೆ ಅನುಸಾರವಾಗಿ ಅಗತ್ಯವಾದ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ವಕ್ತಾರ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ವಿದೇಶಗಳಿಗೆ ಚೀನಾ, ಅವಕಾಶ ನೀಡುತ್ತಿದೆಯೇ ಎಂದು ಸ್ಪುಟ್ನಿಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವೈರಸ್ ನಿಂದ ಕೇಂದ್ರೀಕೃತವಾಗಿರುವ ಹುಬೈ ಪ್ರಾಂತ್ಯದ ವಿದೇಶಿ ನಾಗರಿಕರ ಸುರಕ್ಷತೆಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಸೋಂಕು ಹರಡಿರುವ ಎಲ್ಲ ಪ್ರದೇಶಗಳಿಂದ ವಿದೇಶಿಯರನ್ನು ಸ್ಥಳಾಂತರಿಸಲು ಆಯಾ ದೇಶಗಳಿಗೆ ಸಹಾಯ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.