ಬೀಜಿಂಗ್ ಸೆ. 10 ವಿಶ್ವದ ಅತಿದೊಡ್ಡ ಇ- ಕಾಮರ್ಸ ದೈತ್ಯ, ಚೈನಾದ ಇ- ಕಾಮರ್ಸ ರಿಟೈಲ್ ಕಂಪನಿ ಅಲಿಬಾಬಾ ಸಹ ಸಂಸ್ಥಾಪಕ ಕೋಟ್ಯಾಧೀಶ ಜ್ಯಾಕ್ ಮಾ (55) ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಜ್ಯಾಕ್ ಮಾ ತಮ್ಮ 55 ನೇ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 10 ರಂದು ಅಲಿಬಾಬಾ ಅಧ್ಯಕ್ಷ ಸ್ಥಾನದಿಂದ ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ಆದಾಗ್ಯೂ, ಅವರು ಕಂಪನಿಯ ಬಹುಪಾಲು ನಿರ್ದೇಶಕ ಮಂಡಳಿ ನೇಮಿಸುವ ಹಕ್ಕನ್ನು ಹೊಂದಿರುವ ಸಮಿತಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಜ್ಯಾಕ್ ಜಾಂಗ್ ಸ್ಥಾನದಲ್ಲಿ ಕಂಪನಿಯ ಸಿಇಒ ಡೆನಿಯಲ್ ಜಾಂಗ್ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಇಂಗ್ಲಿಷ್ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಜ್ಯಾಕ್ ಕೋಟ್ಯಾಧಿಪತಿ ಉದ್ಯಮಿಯಾಗಿ ಹೊರಹೊಮ್ಮಿದರು. ಪ್ರಮುಖವಾಗಿ ಹೇಳುವುದಾದರೆ, 1999 ರಲ್ಲಿ ಸ್ಥಾಪನೆಯಾದ ಇ- ಕಾಮರ್ಸ್ ದೈತ್ಯ ಅಲಿಬಾಬಾದ ಸಹ-ಸಂಸ್ಥಾಪಕರಾಗಿ ಕಂಪನಿಯ ಯಶಸ್ಸಿಗೆ ಜ್ಯಾಕ್ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕಾ -ಚೀನಾ ವಾಣಿಜ್ಯ ಸಮರದ ನಡುವೆ ಹೆಚ್ಚುತ್ತಿರುವ ವ್ಯಾಪಾರ ವಹಿವಾಟು ಅನಿಶ್ಚಿತತೆ ನಡುವೆ ವಿಶ್ವದ ಅಗ್ರ ಹತ್ತು ಇ-ಕಾಮರ್ಸ್ ಕಂಪನಿಗಳ ಪೈಕಿ ಒಂದಾಗಿರುವ ಅಲಿಬಾಬಾ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಜ್ಯಾಕ್ ಕೆಳಗಿಳಿಯುತ್ತಿದ್ದಾರೆ.
ನನಗೆ ಇನ್ನೂ ಹಲವು ಕನಸುಗಳಿವೆ. ನಾನು ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವ ಜಾಯಾಮಾನದವನಲ್ಲ ಎಂಬುದು ನನ್ನ ಬಲ್ಲ ಎಲ್ಲರಿಗೂ ತಿಳಿದಿರುವ ಸಂಗತಿ. ಜಗತ್ತು ದೊಡ್ಡದಾಗಿದೆ, ನಾನು ಇನ್ನೂ ಚಿಕ್ಕವನಾಗಿದ್ದೇನೆ, ಹಾಗಾಗಿ ನಾನು ಹೊಸ ವಿಷಯಗಳ ಕಲಿಯಲು ಬಯಸುತ್ತೇನೆ. ಏಕೆಂದರೆ ಹೊಸ ಕನಸುಗಳ ಮೂಲಕ ಹೊಸ ಆವಿಷ್ಕಕಾರಕ್ಕೆ, ಹೊಸ ಕನಸು ಸಾಕಾರಗೊಳಿಸಿಕೊಳ್ಳಬಹುದು ಎಂದು ಜ್ಯಾಕ್ ಕಳೆದ ವರ್ಷ ತಮ್ಮ ನಿವೃತ್ತಿ ಕುರಿತು ಸಂಸ್ಥೆಯ ಉದ್ಯೋಗಿಗಳಿಗೆ ಬರೆದಿದ್ದ ಬಹಿರಂಗ ಪತ್ರ ಹೇಳಿದ್ದರು. ಜೂನ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ದೇಶೀಯ ವಹಿವಾಟಿನ 16.7 ಬಿಲಿಯನ್ ಡಾಲರ್ ಆದಾಯದಲ್ಲಿ ಶೇ. 66 ರಷ್ಟು ಪಾಲು ಅಲಿ ಬಾಬಾ ಸಂಸ್ಥೆಯದು ಎನ್ನುತ್ತಿವೆ ಅಂಕಿ ಅಂಶಗಳು.