ಮಕ್ಕಳು ಪ್ರಾಮಾಣಿಕವಾಗಿ ಓದುಬರಹ ಮಾಡಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

ಮಕ್ಕಳು ಪ್ರಾಮಾಣಿಕವಾಗಿ ಓದುಬರಹ ಮಾಡಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು  Children should read and write honestly: District Collector Divya Prabhu

ಧಾರವಾಡ ಜೂ.23: ನಮ್ಮಂತ ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಪ್ರಾಮಾಣಿಕ ಓದು, ಕಠಿಣ ಪರಿಶ್ರಮಗಳೆ ಬದುಕಿನ ಬೆಳಕಾಗಿವೆ. ಮಕ್ಕಳು ಪ್ರಾಮಾಣಿಕವಾಗಿ, ಮನಮುಟ್ಟುವಂತೆ ಓದಬೇಕು. ಈ ಓದು ಉನ್ನತ ಹುದ್ದೆ, ಉತ್ತಮ ಸ್ಥಾನಮಾನ, ಹೆಚ್ಚಿನ ಸಾಧನೆಗಳಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆವರಣದಲ್ಲಿರುವ ಶ್ರೀ ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿಶಾಲೆಯ ಪ್ರಸಕ್ತ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ವಿದ್ಯಾರ್ಥಿ ಜೀವನದಲ್ಲಿ 6ನೇ ವರ್ಗದಿಂದ 12 ನೇ ವರ್ಗದ ಓದು ಸಾಧನೆಗೆ ಮುಖ್ಯವಾಗುತ್ತದೆ. ಕಠಿಣ ಪರಿಶ್ರಮ, ಏಕಾಗ್ರತೆ, ಶಿಸ್ತು, ಛಲ, ವಿನಯ ಇರಬೇಕು.  ಸ್ಫರ್ಧೆಯಲ್ಲಿ ಗೆಲವು ಮತ್ತು ಕಲಿಕೆ ಮಾತ್ರ ಇರುತ್ತದೆ. ಸೋಲು ಎಂಬುದು ಇಲ್ಲ. ಇದನ್ನು ಅರ್ಥೈಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಪೊಲೀಸ್ ವಸತಿ ಶಾಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧವಿದೆ. ಮಕ್ಕಳು ಓದು, ಕ್ರೀಡೆಗಳಲ್ಲಿ ಗುರಿ ಹೊಂದಿ, ಪ್ರಯತ್ನಿಸಬೇಕು ಎಂದರು. 

ದೇಶಭಕ್ತಿ, ತಂದೆ-ತಾಯಿ ಬಗ್ಗೆ ಗೌರವ, ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. 

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಮಾತನಾಡಿ, ಪೊಲೀಸ್ ಶಾಲೆ ಶಿಸ್ತು ಕಲಿಸುತ್ತದೆ. ಪೊಲೀಸ್ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಓದು, ಬರಹ ಮತ್ತು ಗುರಿ ಸಾಧಿಸುವಲ್ಲಿ ಬದ್ಧತೆ ಇರಬೇಕು ಎಂದರು.   

ಮಕ್ಕಳು ಓದುವ ವಯಸ್ಸಿನಲ್ಲಿ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಕುತೂಹಲ, ಕಲಿಕೆಯ ಹಸಿವು ಇರಬೇಕು. ಇಂದಿನ ಉತ್ತಮ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಭುವನೇಶ ಪಾಟೀಲ ಅವರು ತಿಳಿಸಿದರು.  

ಐಎಎಸ್ ಪ್ರೊಬೇಷನರಿ ರಿತಿಕಾ ವರ್ಮಾ ಅವರು ಮಾತನಾಡಿ, ಮಕ್ಕಳು ಸಹನೆ, ತಾಳ್ಮೆ, ಶ್ರಮದ ಗುಣ ಬೆಳಸಿಕೊಳ್ಳಬೇಕು. ಶಾಲೆಗಳಲ್ಲಿ ಪಡೆಯುವ ಜ್ಞಾನ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ವಿದ್ಯಾರ್ಥಿಗಳು ತಮ್ಮನ್ನು ಮುಕ್ತವಾಗಿ ಒಳಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಮಕ್ಕಳ ವಸತಿ ಶಾಲೆಯ ಮಕ್ಕಳು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮಿಷನ್ ವಿದ್ಯಾಕಾಶಿಯ ಕಾರ್ಯಕ್ರಮಗಳಿಂದ ಶಾಲೆಯ ಶೈಕ್ಷಣಿಕ ಸುಧಾರಣೆಗೆ ಸಹಾಯವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಗೆ ಪ್ರಥಮ ಸ್ಥಾನ ಬರಲು ಈಗಿನಿಂದಲೇ ಮಕ್ಕಳು ಸಿದ್ದತೆ, ಉತ್ತಮ ಅಧ್ಯಯನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.  

ಶಾಲಾ ಸಮಿತಿ ಸದಸ್ಯರು ಜಿ.ಆರ್‌.ಭಟ್ ಅವರು, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾತನಾಡಿದರು. 

ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮಣಿ ಶಾಲೆಯ ಕಾರ್ಯ ಚಟುವಟಿಕೆಗಳನ್ನು ತಿಳಿಸಿ, ನಂತರ ಅವರು ವಂದಿಸಿದರು.  

ಶಾಲೆ ಮುಖ್ಯೋಪಾಧ್ಯಾಯಿನಿ ಡಾ.ಎಸ್‌.ಓ.ಬಿರಾದಾರ ಅವರು ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು.  

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ರಾಷ್ಟ್ರಮಟ್ಟದ ವಿದ್ಯಾರ್ಥಿ ವಿಭಾಗದ ಯೋಗ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪಡೆದ ವಿಜಯಕುಮಾರ ಸಂಗಪ್ಪ ಅರಳಿಕಟ್ಟಿ ಅವರನ್ನು ಹಾಗೂ ಕಳೆದ ವರ್ಷದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸಂಕೇತ ಪೆಡ್ನೇಕರ ಅವರನ್ನು ಸನ್ಮಾನಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಯಿತು. 

ಪೊಲೀಸ್ ಇಲಾಖೆಯ ಪರವಾಗಿ ಎಸ್‌.ಪಿ. ಡಾ.ಗೋಪಾಲ ಬ್ಯಾಕೋಡ ಅವರು ಜಿಲ್ಲಾಧಿಕಾರಿಗಳನ್ನು, ಜಿಲ್ಲಾ ಪಂಚಾಯತ ಸಿಇಓ ಹಾಗೂ ರಿತಿಕಾ ವರ್ಮಾ ಅವರನ್ನು ಸನ್ಮಾನಿಸಿ, ಗೌರವಿಸಿದರು. 

ಇದೇ ಸಂದರ್ಭದಲ್ಲಿ ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಸಸಿಗಳನ್ನು ನೆಡಲಾಯಿತು.  

ಕಾರ್ಯಕ್ರಮದಲ್ಲಿ ಡಿಎಅರ್ ವಿಭಾಗದ ಡಿವೈಎಸ್‌ಪಿ ಡಿ.ಎಸ್‌.ಧನಗರ, ಎಸ್‌.ಪಿ. ಕಚೇರಿ ಸಹಾಯಕ ಆಡಳಿತ ಅಧಿಕಾರಿ ಮಹಾಂತೇಶ ಹಿರೇಮಠ ಹಾಗೂ ಎನ್‌.ಎ.ಮುತ್ತಣ್ಣ ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಇತರು ಭಾಗವಹಿಸಿದ್ದರು. 

ಡಾ.ಎ.ಸಿ.ಅಲ್ಲಯ್ಯನವರಮಠ ಅವರು ಕಾರ್ಯಕ್ರಮ ನಿರೂಪಿಸಿದರು.