ಮಗುವನ್ನು ಕಾನೂನುದ್ಧವಾಗಿ ದತ್ತು ಪಡೆದುಕೊಳ್ಳಬೇಕು-ನ್ಯಾಯಾಧೀಶರಾದ ಬಿರಾದಾರ

 ಮಗುವನ್ನು ಕಾನೂನುದ್ಧವಾಗಿ ದತ್ತು ಪಡೆದುಕೊಳ್ಳಬೇಕು-ನ್ಯಾಯಾಧೀಶರಾದ ಬಿರಾದಾರ Child should be legally adopted - Judge Biradar

ಲೋಕದರ್ಶನ ವರದಿ 

ಮಗುವನ್ನು ಕಾನೂನುದ್ಧವಾಗಿ ದತ್ತು ಪಡೆದುಕೊಳ್ಳಬೇಕು-ನ್ಯಾಯಾಧೀಶರಾದ ಬಿರಾದಾರ   

ಹಾವೇರಿ   15: ದತ್ತು ಪ್ರಕ್ರಿಯೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.  ದತ್ತು ಪ್ರಕ್ರಿಯೆಯಲ್ಲಿ ಅನೇಕ ಪ್ರಕಾರಗಳಿವೆ, ಕೆಲವರು ದತ್ತು ಪತ್ರ ಬರೆಯುತ್ತಿದ್ದರು, ಕೆಲವರು ಹಾಗೆ ಉಡಿಯಲ್ಲಿ ಹಾಕಿಕೊಳ್ಳುವ ಶಾಸ್ತ್ರ ಮಾಡುತ್ತಿದ್ದರು.  ಆದರೆ ಈಗ ಮಗುವನ್ನು ಕಾನೂನು ಬದ್ಧವಾಗಿ ದತ್ತು  ಮಾತ್ರ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರ​‍್ಪ ಎನ್‌. ಅವರು ಹೇಳಿದರು. 

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ  ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಸಂಕಲ್ಪ ಸಂದೇಶ ವಾಚಿಸಿ ಅವರು  ಮಾತನಾಡಿದರು. 

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಹಿನ್ನಲೆಯಲ್ಲಿ, ಬಾಲಕಾರ್ಮಿಕ ಪದ್ಧತಿ ನಿಷೇಧ, ಬಾಲ ವಿವಾಹ ನಿಷೇಧ, ಪೋಕ್ಸೋ ಹೀಗೆ ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಅನಾಥ ಮಕ್ಕಳನ್ನು ಅಪರಾಧಿಗಳ ಕೈಯಿಂದ ತಪ್ಪಿಸಲು ಕಾನೂನು ಬದ್ಧ ದತ್ತು ಪ್ರಕ್ರಿಯೆ ಜಾರಿಗೆ ತರಲಾಗಿದೆ. ನಿರ್ಗತಿಕ ಹಾಗೂ ಅನಾಥ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. 

ಸಮಾಜದಲ್ಲಿ ಶಿಸ್ತಿನ ಜೀವ ನಡೆಸಲು ಮದುವೆಯ ಪರಿಕಲ್ಪನೆ ಇದೆ. ವಿವಾಹವಾದರೆ ಜೀವನಕ್ಕೆ ಲೈಸನ್ಸ್‌ ಸಿಕ್ಕಂತೆ,  ಮದುವೆಯಾದ ದಂಪತಿಗಳಿಗೆ ಮಕ್ಕಳಾದರೆ ಕುಟುಂಬದ ಪ್ರೀತಿ-ವಾತ್ಸಲ್ಯದಲ್ಲಿ ಬೆಳೆಯುತ್ತದೆ. ವಿವಾಹವಾದ ಎಲ್ಲ ದಂಪತಿಗಳಿಗೂ ಮಕ್ಕಳು ಆಗುವುದಿಲ್ಲ. ಆದರೆ ಜೀವನದಲ್ಲಿ ಲೈಸನ್ಸ್‌ ಇಲ್ಲದೆ ಅಂದರೆ ಮದುವೆಯಾಗದವರಿಗೆ ಜನಿಸಿದ ಮಗು ಬೇಡವಾಗುತ್ತದೆ. ಆಗ ಶಿಶುವನ್ನು ಕಸದತೊಟ್ಟಿ, ರೈಲು ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗುತ್ತಾರೆ. ಹೀಗೆ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅವುಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ಅಥವಾ  ಮಮತೆಯ ತೊಟ್ಟಿಲುಗಳಿಗೆ ಹಾಕಬೇಕು ಎಂದು ಕರೆ ನೀಡಿದರು.  

ಇಲ್ಲಿ ಎಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳಿದ್ದೀರಿ, ಭವಿಷ್ಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಸಮಯದಲ್ಲಿ ಇಂತಹ ಮಕ್ಕಳು ಕಂಡುಬಂದಲ್ಲಿ ಅಥವಾ  ಕಾನೂನು ಬಾಹೀರವಾಗಿ ಮಕ್ಕಳ ಮಾರಾಟ ಕಂಡುಬಂದಲ್ಲಿ ಅಂತಹ ಮಕ್ಕಳ ರಕ್ಷಣೆ ಮಾಡುವ ಮೂಲಕ ಆ ಮಕ್ಕಳಿಗೆ ಉತ್ತಮ ಬದುಕು ಕಲ್ಪಿಸಿದಲ್ಲಿ ಸಮಾಜಕ್ಕೆ ದೊಡ್ಡ ಉಪಕಾರ ಮಾಡಿದಂತೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್ ಅವರು ಮಾತನಾಡಿ, ಅನಾದಿಕಾಲದಿಂದ ದತ್ತು ಪದ್ಧತಿ ಜಾರಿಯಲ್ಲಿದೆ.  ಮಕ್ಕಳಲ್ಲಿದವರು ಬೇರೆಯವರ ಮಕ್ಕಳನ್ನು ದತ್ತು ಪಡೆದ ನಂತರ, ಕಾಲಾನಂತರ ಅವರಿಗೆ ಮಕ್ಕಳಾದರೆ ಆಸ್ತಿ ವಿಷಯಕ್ಕೆ ಕಲಹಗಳು ಉಂಟಾದ ಉದಾಹರಣೆಗಳಿವೆ. ಹಾಗಾಗಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ನಡೆಯಬೇಕು. ಇದರಿಂದ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ.  ಆಸ್ಪತ್ರೆಗಳಲ್ಲಿ ಮಕ್ಕಳ ಮಾರಾಟ ಕಂಡು ಬರುತ್ತಿದ್ದು,  ಇದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ ಹಾಗೂ ಅನಾಥ ಮಕ್ಕಳ ಅಂಗಾಂಗ ಮಾರಾಟ ಸಹ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಎಲ್ಲರೂ ಕಂಕಣಬದ್ಧರಾಗಿ ಕೆಲಸಮಾಡಬೇಕು. ಬರುವ ದಿನಗಳಲ್ಲಿ ನೀವು ವೈದ್ಯವೃತ್ತಿ ಆರಂಭಿಸುವವರು, ನಿಮ್ಮ ವೃತ್ತಿ ಜೀವನದಲ್ಲಿ ಆಸ್ಪತ್ರೆಗಳಲ್ಲಿ ಕಾನೂನುಬಾಹೀರವಾಗಿ ಮಕ್ಕಳ ಮಾರಾಟವಾಗದಂತೆ ಎಚ್ಚರವಹಿಸಬೇಕು.  ಕಾನೂನುಬದ್ಧ ದತ್ತು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರದೀಪಕುಮಾರ ಎಂ.ವಿ. ಅವರು ಮಾತನಾಡಿ, ಎಲ್ಲರೂ ಆರೋಗ್ಯವಂತ ಮಕ್ಕಳನ್ನು ದತ್ತು ಪಡೆಯಲು ಮುಂದೆ ಬರುತ್ತಾರೆ. ಆದರೆ ವಿಶೇಷಚೇತನ ಮಕ್ಕಳನ್ನು ದತ್ತು ಪಡೆಯಲು ಅರಿವು ಮೂಡಿಸಬೇಕು ಎಂದು ಹೇಳಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕು.ರೆಹಾನಾ ಚನ್ನಪಟ್ಟಣ ಅವರು  ದತ್ತು ಪ್ರಕ್ರಿಯೆ ಕುರಿತು ಉಪನ್ಯಾಸ ನೀಡಿದರು.  

ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ದತ್ತು ಮಾಸಾಚರಣೆ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.  

ಕಾರ್ಯಕ್ರಮದಲ್ಲಿ  ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ   ಶ್ರೀಶೈಲಜಾ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ   ರೇವತಿ ಹೊಸಮಠ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಆಶಾಕಿರಣ ಉಪಸ್ಥಿತರಿದ್ದರು. 

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಜಯಶ್ರೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿನಯ ಗುಡದೂರ ಕಾರ್ಯಕ್ರಮ ನಿರೂಪಿಸಿದರು  ಮಂಗಳಾ ಅಳಗುಂಡಿ ವಂದಿಸಿದರು.