ಬಾಲ್ಯ ವಿವಾಹ ಕಾನೂನುಬಾಹಿರ: ರೇಣುಕಾ ಜಡಗಣ್ಣನವರ್

ಬಾಲ್ಯ ವಿವಾಹ ಕಾನೂನುಬಾಹಿರ: ರೇಣುಕಾ ಜಡಗಣ್ಣನವರ್ Child marriage is illegal: Renuka Jadagannanavar

ಲೋಕದರ್ಶನ ವರದಿ 

      ಬಳ್ಳಾರಿ  17: ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ತುಂಬುವ ಮುನ್ನ ಮಾಡುವ ಬಾಲ್ಯ ವಿವಾಹವು ಮಕ್ಕಳ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗಣ್ಣನವರ ಅವರು ಹೇಳಿದರು. 

ನಗರ ಆರೋಗ್ಯ ಕೇಂದ್ರ ಕೌಲ್ ಬಜಾರ್ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಹದಿಹರೆಯದ ಆರೋಗ್ಯದ ಕುರಿತು ಸೋಮವಾರ ಏರಿ​‍್ಡಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಬಾಲ್ಯ ವಿವಾಹ ಮಾಡಿಸುವುದು ಅಥವಾ ಪ್ರೋತ್ಸಾಹಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. 

ಇಂತಹ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಅಥವಾ 112ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದ ಅವರು, ಜೊತೆಗೆ ಪೋಕ್ಸೋ ಕಾಯ್ದೆ-2012ರ ಅಡಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತೂ ಮಾಹಿತಿ ನೀಡಿದರು. 

ಕಡಿಮೆ ವಯಸ್ಸಿನ ಗರ್ಭಧಾರಣೆಯಿಂದ ತಾಯಿ-ಶಿಶು ಮರಣದ ಅಪಾಯ, ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಕಡಿಮೆ ತೂಕದ ಮಗುವಿನ ಜನನದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಬಾಲ್ಯ ವಿವಾಹದಿಂದ ಶಿಕ್ಷಣ ಮೊಟಕುಗೊಳ್ಳುವುದರ ಜೊತೆಗೆ ಆತಂಕ, ಖಿನ್ನತೆ ಮತ್ತು ಸಾಮಾಜಿಕ ಪ್ರತ್ಯೇಕತೆ ಕಾಡುತ್ತದೆ. ಮಾನಸಿಕ ನೆರವಿಗಾಗಿ ಉಚಿತ ‘ಟೆಲಿ-ಮನಸ್‌’ ಸಹಾಯವಾಣಿ ಸಂಖ್ಯೆ 14416 ಅನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು. 

ಹದಿಹರೆಯದ ಹೆಣ್ಣುಮಕ್ಕಳು ರಕ್ತಹೀನತೆ ತಡೆಗಟ್ಟಲು ಪೌಷ್ಟಿಕ ಆಹಾರದೊಂದಿಗೆ ವಾರಕ್ಕೊಮ್ಮೆ ಕಬ್ಬಿಣಾಂಶ (ಐರನ್) ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು. ಹದಿಹರೆಯದಲ್ಲಿ ದೇಹದಲ್ಲಿ ಸಹಜ ಬದಲಾವಣೆಗಳು ಕಂಡುಬರುವುದರಿಂದ ಸೂಕ್ತ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು. 

ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತವ್ವ ಉಪ್ಪಾರ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಗಂಗಮ್ಮ, ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಜ್ಞಾ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.