ರಾಜ್ಯದಲ್ಲಿ ಬರ ನಿರ್ವಹಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

ರಾಜ್ಯದಲ್ಲಿ ಬರ ನಿರ್ವಹಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ Chief Minister D.K. Shivakumar issues strict instructions for drought management in the state

ಲೋಕದರ್ಶನ ವರದಿ 

 ಕಾರವಾರ 19 : ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  ಅವರು ಭಾನುವಾರ ವಿಧಾನಸೌಧದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆದ ವೀಡಿಯೊ ಕಾನ್ಫರೆನ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

 ರಾಜ್ಯದಲ್ಲಿ ಜುಲೈ 18ರವರೆಗೆ ಒಟ್ಟಾರೆ ಶೇ. 39 ರಷ್ಟ್ಟು ಮುಂಗಾರು ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ ಶೇ. -43, ಕರಾವಳಿಯಲ್ಲಿ ಶೇ.-35, ಉತ್ತರ ಒಳನಾಡಿನಲ್ಲಿ ಶೇ. -33 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ. -31 ರಷ್ಟ್ಟು ಮಳೆ ಕೊರತೆ ದಾಖಲಾಗಿದೆ. 158 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, 20 ತಾಲೂಕುಗಳಲ್ಲಿ ತೀವ್ರ ಕೊರತೆಯಿದೆ. ವಿಜಯನಗರ ಜಿಲ್ಲೆಯು ಅತ್ಯಧಿಕ ಶೇ. -67 ರಷ್ಟ್ಟು ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು, 509 ಹೋಬಳಿಗಳಲ್ಲಿ ಕೊರತೆ ಹಾಗೂ 118 ಹೋಬಳಿಗಳಲ್ಲಿ ತೀವ್ರ ಮಳೆ ಕೊರತೆ ಕಂಡುಬ0ದಿದೆ ಎಂದರು.  

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆಯಾಗಿ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದ್ದು (359.98 ಟಿಎಂಸಿ), ಕಳೆದ (681.83 ಟಿಎಂಸಿ) ಸಂಗ್ರಹಕ್ಕೆ ಹೋಲಿಸಿದರೆ ಅರ್ಧದಷ್ಟಿದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಸರಾಸರಿ ಶೇ. 23 ರಷ್ಟು ಇದೆ ಎಂದರು.  

ಪ್ರಸ್ತುತ 122 ತಾಲೂಕುಗಳ 539 ಗ್ರಾಮ ಪಂಚಾಯತ್ಗಳಲ್ಲಿ ಹಾಗೂ 17 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ವಿಧಾನಸಭಾ ವ್ಯಾಪ್ತಿಗೆ ಹೆಚ್ಚುವರಿಯಾಗಿ ತಲಾ ರೂ. 1 ಕೋಟಿ ಒದಗಿಸಲಾಗುವುದು. ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ. ಖಾತೆಯಲ್ಲಿ ಒಟ್ಟು ರೂ. 329.60 ಕೋಟಿ ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.  

ರಾಜ್ಯದಲ್ಲಿ ಈ ಬಾರಿ ಬಿತ್ತನೆ ಕುಂಠಿತಗೊ0ಡಿದ್ದು, 84.10 ಲಕ್ಷ ಹೆಕ್ಟೇರ್ ಗುರಿಯಲ್ಲಿ ಕೇವಲ 43.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜಲಾಶಯಗಳ ನೀರಿನ ಲಭ್ಯತೆ ನೋಡಿಕೊಂಡು ರೈತರಿಗೆ ಸೂಕ್ತ ಬೆಳೆ ಬೆಳೆಯುವಂತೆ ಮಾಹಿತಿ ನೀಡಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವನ್ನು ಖಾತ್ರಿಪಡಿಸಲು ಲಭ್ಯವಿರುವ ನೀರಾವರಿ ಬಳಸಿ ಮೇವಿನ ಬೀಜ ಬಿತ್ತನೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿದರು..