ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ  Celebration of Vishwakarma Jayanti at Sri Ghanamatheshwara Educational Institution

ಲೋಕದರ್ಶನ ವರದಿ 

  ತಾಳಿಕೋಟೆ 17: ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್ 17, 2026ರಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ. ಸಜ್ಜನ ಅವರು ಮಾತನಾಡಿ, ವಿಶ್ವಕರ್ಮ ದೇವರು ಹಿಂದೂ ಧರ್ಮದ ಪುರಾಣಗಳಲ್ಲಿ ದೇವತೆಗಳ ಶಿಲ್ಪಿ ಹಾಗೂ ವಾಸ್ತುಶಿಲ್ಪಿಯಾಗಿ ಪ್ರಸಿದ್ಧರಾಗಿದ್ದಾರೆ. ಕಲೆ, ಶಿಲ್ಪಕಲೆ, ಕಟ್ಟಡ ನಿರ್ಮಾಣ ಹಾಗೂ ತಾಂತ್ರಿಕ ಕೌಶಲ್ಯದ ಅಧಿದೇವತೆಯಾಗಿ ಅವರನ್ನು ಪೂಜಿಸಲಾಗುತ್ತದೆ ಎಂದು ಹೇಳಿದರು. ಪುರಾಣಗಳ ಪ್ರಕಾರ, ವಿಶ್ವಕರ್ಮ ದೇವರು ದೇವತೆಗಳಿಗಾಗಿ ಅನೇಕ ಅದ್ಭುತ ಅರಮನೆಗಳು, ನಗರಗಳು ಹಾಗೂ ಆಯುಧಗಳನ್ನು ನಿರ್ಮಿಸಿದ್ದಾರೆ. ಶ್ರೀಕೃಷ್ಣನ ದ್ವಾರಕಾ ನಗರ, ಚಿನ್ನದ ಲಂಕೆ ಹಾಗೂ ದೇವತೆಗಳ ವಿವಿಧ ಕಟ್ಟಡಗಳ ನಿರ್ಮಾಣವು ವಿಶ್ವಕರ್ಮರೊಂದಿಗೆ ಸಂಬಂಧಿಸಿದ ಪ್ರಮುಖ ಪುರಾಣಕಥೆಗಳಾಗಿವೆ ಎಂದು ವಿವರಿಸಿದರು.  

ವಿಶ್ವಕರ್ಮರ ಆದರ್ಶಗಳು ಹಾಗೂ ಮೌಲ್ಯಗಳು ಇಂದಿನ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಸವರಾಜ, ಆರ್‌.ಎಸ್‌. ದೇಸಾಯಿ, ದೈಹಿಕ ಶಿಕ್ಷಕರಾದ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯರಾದ ಜಯಚಂದ್ರ, ಬೆಸ್ಟ್‌ ಪಿಯು ಕಾಲೇಜಿನ ಪ್ರಾಚಾರ್ಯರಾದ  ಎಂ. ಮಾರೇಣ್ಣಾ, ಬಿ.ಎಡ್‌. ಕಾಲೇಜಿನ ಪ್ರಾಚಾರ್ಯರಾದ ಜಿ.ಎನ್‌. ಪಾಟೀಲ, ಐಟಿಐ ಕಾಲೇಜಿನ ರಾಜು ಹಜೇರಿ, ಸರ್ವ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.