ಕಿನ್ನಾಳದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಕಿನ್ನಾಳದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ  Celebration of Eid Milad in Kinnala


ಕೊಪ್ಪಳ 26: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಈದ್ ಮಿಲಾದುನ್ನಬಿ ಹಬ್ಬವನ್ನು ಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಜರತ್ ಮೊಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆ (ಜುಲೂಸ್) ಸಾರ್ವಜನಿಕರ ಗಮನ ಸೆಳೆಯಿತು.  

ಬೆಳಗ್ಗೆಯೇ ಅಹಲೆ ಸುನ್ನಿ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಮಕ್ಕಾ ಮತ್ತು ಮದೀನಾ ಮಾದರಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗಿದ್ದ ತೆರೆದ ವಾಹನ ಪ್ರಮುಖ ಆಕರ್ಷಣೆಯಾಗಿತ್ತು. ಹಸಿರು ಧ್ವಜಗಳು, ಧಾರ್ಮಿಕ ಘೋಷಣೆಗಳು ಹಾಗೂ ಮಕ್ಕಳ ಉತ್ಸಾಹದ ನಡುವೆ ಮೆರವಣಿಗೆ ಸಾಗಿತು. ಪೈಗಂಬರ್ ಅವರ ಜಯಘೋಷಗಳು ಮೊಳಗಿದ್ದು, ಗ್ರಾಮದಲ್ಲಿ ಧಾರ್ಮಿಕ ಉತ್ಸಾಹದ ವಾತಾವರಣ ನಿರ್ಮಾಣವಾಯಿತು.  

ಗ್ರಾಮದ ಪ್ರಮುಖ ವೃತ್ತಗಳು ಹಾಗೂ ಸ್ಮಾರಕಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮೊದಲು ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರೆ​‍್ಣ ಮಾಡಲಾಯಿತು. ಬಳಿಕ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು. ನಂತರ ಶ್ರೀ ಸಿದ್ದರಾಮೇಶ್ವರ ವೃತ್ತ, ಶ್ರೀ ಹಜರತ್ ಟಿಪ್ಪು ಸುಲ್ತಾನ್ ವೃತ್ತ ಹಾಗೂ ಶ್ರೀ ಭಗತ್ ಸಿಂಗ್ ವೃತ್ತಗಳಲ್ಲಿರುವ ಪ್ರತಿಮೆಗಳಿಗೆ ಮಾಲಾರೆ​‍್ಣ ಮಾಡುವ ಮೂಲಕ ಸರ್ವಧರ್ಮ ಸಮಭಾವ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರಲಾಯಿತು.  

ಮುಂದುವರಿದ ಮೆರವಣಿಗೆ ಹಜರತ್ ರಾಜಾ ಬಾಗಸವಾರ್ (ಯಮನೂರ​‍್ಪ) ದರ್ಗಾ ಮಾರ್ಗವಾಗಿ ಸಾಗಿ, ಶ್ರೀ ಕನಕದಾಸ ವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರೆ​‍್ಣ ಮಾಡಿತು. ವಿವಿಧ ಮಹನೀಯರ ಪ್ರತಿಮೆಗಳಿಗೆ ಗೌರವ ಸಲ್ಲಿಸುವ ಮೂಲಕ ಸಮಾಜದಲ್ಲಿ ಸಹಬಾಳ್ವೆ, ಸೌಹಾರ್ದತೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಪ್ರತಿಪಾದಿಸಲಾಯಿತು.  

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಕೊನೆಗೆ ಅಹಲೆ ಸುನ್ನಿ ಜಾಮಿಯಾ ಮಸೀದಿ ತಲುಪಿತು. ಬಳಿಕ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.  ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ನೌಜವಾನ್ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಯುವಕರು, ಮಕ್ಕಳು ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  

ಕಿನ್ನಾಳ ಗ್ರಾಮದಲ್ಲಿ ನಡೆದ ಈದ್ ಮಿಲಾದುನ್ನಬಿ ಆಚರಣೆಯು ಧಾರ್ಮಿಕ ಭಾವನೆಯೊಂದಿಗೆ ಸೌಹಾರ್ದತೆ, ಸಹೋದರತ್ವ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.