ಕಿತ್ತೂರು ರಾಣಿ ಚನ್ನಮ್ಮ ವಿಜಯದ 200ನೇ ವರ್ಷದ ಸಂಭ್ರಮಾಚರಣೆ

ಕಿತ್ತೂರು ರಾಣಿ ಚನ್ನಮ್ಮ ವಿಜಯದ 200ನೇ ವರ್ಷದ ಸಂಭ್ರಮಾಚರಣೆ Celebrating the 200th anniversary of the victory of Queen Channamma of Kittur

ಬೆಳಗಾವಿ: 23: ಕಿತ್ತೂರು ರಾಣಿ ಚನ್ನಮ್ಮ ಅವರ ಐತಿಹಾಸಿಕ ವಿಜಯದ 200ನೇ ವರ್ಷದ ಸಂಭ್ರಮಾಚರಣೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಭವ್ಯವಾಗಿ ನಡೆಯಿತು. ಈ ಕಾರ್ಯಕ್ರಮವನ್ನು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. 

ಅಧ್ಯಕ್ಷೀಯ ಭಾಷಣ ಮಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಅವರು ಯುವಕರು ರಾಣಿ ಚನ್ನಮ್ಮನ ಧೈರ್ಯ, ತ್ಯಾಗ ಹಾಗೂ ಅಜೇಯ ಮನೋಬಲದಿಂದ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದರು. ಯುವಕರ ಶಕ್ತಿ, ಜ್ಞಾನ ಮತ್ತು ಉನ್ನತ ಚಿಂತನೆಗಳು ರಾಷ್ಟ್ರದ ಪ್ರಗತಿಯ ಆಧಾರವಾಗಬೇಕು ಎಂದು ಅವರು ಹಿತವಚನ ನೀಡಿದರು. ಯುವಜನರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಸಮಾಜ ಸೇವೆಗೆ ಅರ​‍್ಿಸಿದಾಗ ಮಾತ್ರ ನಿಜವಾದ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಕುಲಪತಿಗಳು ತಿಳಿಸಿದರು. ಅವರ ಮಾತುಗಳು ಸಮಾರಂಭಕ್ಕೆ ಸ್ಫೂರ್ತಿಯ ಚೈತನ್ಯ ತುಂಬಿದವು. 

ಪ್ರೊ. ರಾಜಪ್ಪ ದಳವಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಣಿ ಚನ್ನಮ್ಮ ಶ್ರೇಷ್ಠತೆ ಮತ್ತು ಪ್ರೇರಣೆಯ ಶಾಶ್ವತ ಚಿಹ್ನೆ ಎಂದು ಕೊಂಡಾಡಿದರು. ಡಾ. ವಿಜಯಲಕ್ಷ್ಮಿ ತಿರ್ಲಾಪುರ, ಲೇಖಕಿ ಹಾಗೂ ಖಾನಾಪುರದ ಎಂ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ರಾಣಿ ಚನ್ನಮ್ಮನ ಜೀವನ ಚರಿತ್ರೆ ಹಾಗೂ ಹೋರಾಟವನ್ನು ವಿವರಿಸಿದರು. ಪ್ರಭಾವತಿ ಫಕೀರಾಪುರ, ಆಯುಕ್ತೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರನ್ನು ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರವಾಗಿ ರೂಪಿಸುವ ಭವಿಷ್ಯಯೋಜನೆಗಳನ್ನು ಹಂಚಿಕೊಂಡರು. 

ಕಾರ್ಯಕ್ರಮದಲ್ಲಿ ಅಧ್ಯಯನ ಪೀಠ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯಣ್ಣ ಶೆಟ್ಟಿಗಾರ್ ತಂತ್ರಾಡಿಯವರ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾರಂಗ ಹಿರಿಯರ-ಕಿರಿಯರ ಕಲಾಸಂಸ್ಥೆ ತಂಡದವರಿಂದ ಮಂದರ್ತಿ ಉಡುಪಿ ಜಿಲ್ಲೆ ಇವರು ಯಕ್ಷಗಾನ ನಡೆಸಿಕೊಟ್ಟರು. 

ಸ್ನೇಹಾ ಕಾಂಬಳೆ ಮತ್ತು ತಿಪ್ಪೇಶ ಲಕ್ಕಿಕೋಣೆ ಸ್ವಾಗತಗೀತೆ ಹಾಡಿದರು. ಡಾ. ಹನುಮಂತಪ್ಪ ಡಿ.ಜಿ., ಸಂಯೋಜಕ, ರಾಣಿ ಚನ್ನಮ್ಮ ಅಧ್ಯಯನ ಪೀಠ, ಸ್ವಾಗತಿಸಿದರು. ಪ್ರೊ. ನಾಗರತ್ನಾ ಪರಾಂಡೆ, ನಿರ್ದೇಶಕಿ, ಅಧ್ಯಯನ ಪೀಠ, ಪರಿಚಯಿಸಿದರು. ಗೋಪಿಕಾ ಕುಲಕರ್ಣಿ ವಂದಿಸಿದರು. ಸಮೃದ್ದಿ ಬರ್ವೆ ಮತ್ತು ಗೋಪಿಕಾ ಕುಲಕರ್ಣಿ ನಿರೂಪಿಸಿದರು.