ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಿ: ಸಿಪಿಐ ಫಸಿವುದ್ದೀನ

ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಿ: ಸಿಪಿಐ ಫಸಿವುದ್ದೀನ Celebrate festivals without hurting religious sentiments: CPI's Fasivuddin

ತಾಳಿಕೋಟಿ 14: ಪಟ್ಟಣದಲ್ಲಿ ಈ ಮಾಸಾಂತ್ಯದಲ್ಲಿ ಆಚರಿಸಲಿರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಲು ಪ್ರಯತ್ನಿಸಿ ಎಂದು ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ಹೇಳಿದರು. 

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ನಿಮಿತ್ಯ ಬುಧವಾರ ಕರೆದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಸಾಧ್ಯವಿದ್ದಷ್ಟು ಎಲ್ಲರೂ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಳ್ಳಬೇಕು ಇದರಿಂದ ಯಾವುದೇ ಒಂದು ಅಹಿತಕರ ಘಟನೆ ಸಂಭವಿಸಿದರೆ ಅದನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಗಣೇಶ್ ಪ್ರತಿಷ್ಠಾಪನೆಗೆ ಅಗತ್ಯವಿರುವ ಪೊಲೀಸ್, ಹೆಸ್ಕಾಂ ಹಾಗೂ ಸ್ಥಳೀಯ ಸಂಸ್ಥೆ ಈ ಮೂರು ಇಲಾಖೆಗಳ ಅನುಮತಿ ಪತ್ರ ಪಡೆಯಲು ಅನುಕೂಲವಾಗುವಂತೆ ಪೊಲೀಸ್ ಠಾಣೆಯಲ್ಲಿಯೇ ಇದರ ವ್ಯವಸ್ಥೆಯನ್ನು ಮಾಡಲಾಗುವುದು,ಗಣೇಶ ಪ್ರತಿಷ್ಠಾಪನಾ ಮಂಡಳಿಯ ಮುಖ್ಯಸ್ಥರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಇಲಾಖೆಗೆ ಕೊಡಬೇಕು. ಎರಡೂ ಸಮುದಾಯದ ಹಬ್ಬಗಳು ಕೂಡಿ ಬಂದಿರುವುದರಿಂದ ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಆಚರಿಸಲು ಪ್ರಯತ್ನಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಇಲಾಖೆ ನಿಮ್ಮೊಂದಿಗೆ ಸದಾ ಸಹಕರಿಸುತ್ತದೆ ಎಂದರು.ಠಾಣಾ ಪಿ.ಎಸ್‌.ಐ. ಜ್ಯೋತಿ ಖೋತ ಅವರು ಮಾತನಾಡಿ ಎರಡೂ ಹಬ್ಬಗಳಿಗೆ ಇಲಾಖೆ ಕೆಲವು ನಿರ್ದೇಶನಗಳನ್ನು ಕೊಡಲಿದ್ದು ಅವುಗಳನ್ನು ಪಾಲಿಸುತ್ತಾ ಶಾಂತ ರೀತಿಯಿಂದ ಹಬ್ಬಗಳನ್ನು ಆಚರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ, ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಆದಷ್ಟು ಸ್ಥಳದಲ್ಲಿಯೇ ಇರಲು ಪ್ರಯತ್ನಿಸಿ ಇಲಾಖೆಯೊಂದಿಗೆ ಸಹಕಾರ ಕೊಡಿ ನಾವು ಸಹ ನಿಮ್ಮೊಂದಿಗೆ ಸಹಕರಿಸುತ್ತೇವೆ ಎಂದರು. ಪಟ್ಟಣದ ಗಣ್ಯರಾದ ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನ್ಸೂರ್, ಜೈ ಭೀಮ ಮುತ್ತಗಿ ಮಾತನಾಡಿ ಪಟ್ಟಣ ಶಾಂತಿ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ ಇಲ್ಲಿ ಎಲ್ಲ ಸಮಾಜದವರು ಕೂಡಿಕೊಂಡು ಹಬ್ಬಗಳನ್ನು ಆಚರಿಸುತ್ತಾರೆ.

ಈ ಎರಡೂ ಹಬ್ಬಗಳನ್ನೂ ಸಹ ಇಲಾಖೆಯ ನಿರ್ದೇಶನಗಳನ್ನು ಪಾಲಿಸುತ್ತಾ ಎಲ್ಲರೂ ಒಂದಾಗಿ ಆಚರಿಸೋಣ ಎಂದರು. ಗಣೇಶ ಪ್ರತಿಷ್ಠಾಪನಾ ಮಂಡಳಿಯ ಮುಖ್ಯಸ್ಥರಾದ ರಾಘವೇಂದ್ರ ವಿಜಾಪುರ, ವಿಜಯ ಕಲಾಲ ಹಾಗೂ ನಾಗರಾಜ್ ಬಳಿಗಾರ ಕೆಲವು ಸಲಹೆ ಸೂಚನೆಗಳನ್ನು ನೀಡಿ ಇಲಾಖೆಯ ಸಹಕಾರ ಕೋರಿದರು. ಪಿಎಸ್‌ಐ ಆರ್‌.ಎಸ್‌.ಭಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿದ್ದನಗೌಡ ದೊಡ್ಡಮನಿ ನಿರೂಪಿಸಿದರು. 

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಶಿವಾನಂದ ಜುಮನಾಳ, ಹವಾಲ್ದಾರ್ ಎಂ.ಎಲ್,ಪಟ್ಟೇದ, ಹೆಸ್ಕಾಂ ಎಇಇ ವಿಜಯಕುಮಾರ್ ಬಿರಾದಾರ ಅಗ್ನಿಶಾಮಕ ದಳದ ಮಹಾಂತೇಶ ಬಿರಾದಾರ, ಪುರಸಭೆ ಸದಸ್ಯರಾದ ಡಿ.ವಿ.ಪಾಟೀಲ,ಪರಶುರಾಮ್ ತಂಗಡಗಿ, ಜೈಸಿಂಗ್ ಮೂಲಿಮನಿ, ಗಣ್ಯರಾದ ಪ್ರಕಾಶ ಹಜೇರಿ,ಸಂಗನಗೌಡ ಅಸ್ಕಿ, ಸಿಕಂದರ ವಠಾರ, ಶಶಿಧರ ಡಿಸಲೆ,ಡಿ.ಕೆ.ಪಾಟೀಲ,ಶಪೀಕ ಇನಾಮದಾರ,ಆಸೀಫ ಕೆಂಭಾವಿ, ಗಣೇಶ ಪ್ರತಿಷ್ಠಾಪನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.