ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸಂಭ್ರಮದಿಂದ ಆಚರಿಸಿ: ಡಾ.ದುರಗೇಶ್ ಕೆ.ಆರ್‌

 ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸಂಭ್ರಮದಿಂದ ಆಚರಿಸಿ: ಡಾ.ದುರಗೇಶ್ ಕೆ.ಆರ್‌ Celebrate Kittur Rani Channamma Jayanti with enthusiasm: Dr. Duragesh K.R.

 ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸಂಭ್ರಮದಿಂದ ಆಚರಿಸಿ: ಡಾ.ದುರಗೇಶ್ ಕೆ.ಆರ್‌. 

ಗದಗ  16: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಬೇಕೆಂದು  ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌. ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತದಿಂದ ಅಕ್ಟೋಬರ 23 ರಂದು ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.  

ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರು ಚನ್ನಮ್ಮನವರ ಗೌರವಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 23, 24 ಹಾಗೂ 25 ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದ ಪೂರ್ವಭಾವಿಯಾಗಿ ಈಗಾಗಲೇ ವಿಜಯಜ್ಯೋತಿ ಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು   ಗದಗ ಜಿಲ್ಲೆಗೆ  ಅಕ್ಟೋಬರ್ 14 ರಂದು  ಆಗಮಿಸಿತ್ತು.  ಆ ಸಂದರ್ಭದಲ್ಲಿ  ವಿಜಯ ಜ್ಯೋತಿಯ ಪೂಜೆ  ನೆರವೇರಿತು. ವಿಜಯ ಜ್ಯೋತಿಯ ಯಾತ್ರೆಯು ಚನ್ನಮ್ಮ ವೃತ್ತಕ್ಕೆ ಬಂದು ತಲುಪಿ ನಂತರ ಸಂಭ್ರಮದಿಂದ ಬೀಳ್ಕೊಡುಗೆ ಸಮಾರಂಭ ಜರುಗಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಶಿಸಿದರು.      

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ ಮಾತನಾಡಿ  ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣ ಕ್ರಮ ವಹಿಸಲಾಗುವುದು.  ಎಸ್‌.ಎಸ್‌.ಎಲ್‌.ಸಿ. ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು  ಎಂದರು.   ವಿಶೇಷ ಉಪನ್ಯಾಸ, ವೇದಿಕೆ ವ್ಯವಸ್ಥೆ, ಅಲ್ಪೋಪಹಾರದ ವ್ಯವಸ್ಥೆ, ಬ್ಯಾನರ್ ಅಳವಡಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ  ಪಂಚಮಸಾಲಿ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಮುಖಂಡರು, ಮಹಿಳಾ ಪ್ರತಿನಿಧಿಗಳು, ಹಿರಿಯರು, ಗಣ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.