ಕಲಬುರಗಿ, ಫೆ.5 , ಬಿಸಿಲು ನಾಡು ಕಲಬುರಗಿಂಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಭವ್ಯ ಮೆರವಣಿಗೆಯನ್ನು ರಾಜ್ಯದ ಉಪಮುಖ್ಯಮಂತ್ರಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಗೋವಿಂದ ಎಂ. ಕಾರಜೋಳ ಅವರು ಬುಧವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಮಾಜಿ ವಿಧಾನ ಪರಿಷತ್ ಶಾಸಕ ಅಲ್ಲಮಪ್ರಭು ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ, ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ಚಾಲನೆಗೊಂಡ ಈ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ನಗರದ ಅನ್ನಪೂರ್ಣ ಕ್ರಾಸ್, ಬಸವೇಶ್ವರ ಆಸ್ಪತ್ರೆ, ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ಬಂದು ತಲುಪಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 60ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದ ಮೆರಗನ್ನು ಹೆಚ್ಚಿಸಿದವು. ಕಲಬುರಗಿಯ ಸಂಜು ಬರಗಾಲಿ ಅವರ ಡೊಳ್ಳು ಕುಣಿತ ಹಾಗೂ ಕೊಪ್ಪಳದ ರೇಖಾ ಇಟಗಿಯ ಮಹಿಳಾ ವೀರಗಾಸೆ ಕಲಾ ತಂಡದ ವೀರಗಾಸೆ ಕುಣಿತ ಜನರನ್ನು ತನ್ನತ್ತ ಸೆಳೆಯಿತು. ಸಮ್ಮೇಳನದ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಕುಣಿತ ಮತ್ತು ಚಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ ಕುಣಿತ, ಹೆಜ್ಜೆಮೇಳ, ರಣ ಹಲಗೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ವಲಯ ಮಾದೇಶ್ವರ ಬೀಸು ಕಂಸಾಳೆ, ವಿರಗಾಸೆ ಕುಣಿತ, ಕೊಂಬು ಕಹಳೆ, ಸಂಬಳ ವಾದ್ಯ, ಮೋಜಿನ ಕುಣಿತ, ಸಮರ ಕಲೆ, ಕತ್ತಿ ವರಸೆ, ದಾಲಿಪಟ ಸಾಧನ, ಮುಳ್ಳಿನ ಚಕ್ರ, ವೀರಭದ್ರನ ಕುಣಿತ, ನಗಾರಿ, ಜಾನಪದ ನೃತ್ಯ, ಕಿಲು ಕುಣಿತ, ಗಾರುಡಿ ಗೊಂಬೆ, ಹಗಲು ವೇಷಧಾರಿ ಕುಣಿತ, ಸಮಳಾ ಮತ್ತು ನಂದಿಕೂಲು, ಝಾಂಚ್ ಪಥಕ, ಸೋಮನ ಕುಣಿತ, ಗೋರವರ ಕುಣಿತ, ತಮಟೆ ಬೇಸ್ ಡ್ರಮ್, ಬೆಟ್ಟಮೇಳ ಕಲೆ, ನಾಸಿಕ ಡೋಲ, ಯಕ್ಷಗಾನ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದ್ದವು.