ರಾಯಬಾಗ 23: ಪಿಯುಸಿ ಹಾಗೂ ಡಿಗ್ರಿ ಓದುತ್ತಿರುವ ಗ್ರಾಮೀಣ ಭಾಗದ ದಲಿತ ವಿದ್ಯಾರ್ಥಿಗಳು ನಾಗರಿಕ ಸೇವೆಗಳಲ್ಲಿ ಅವಕಾಶ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಡಾ. ಸೀತವ್ವ ಜೋಡಟ್ಟಿ ಹೇಳಿದರು.
ನುವಾರ ಪಟ್ಟಣದ ನೌಕರರ ಭವನದಲ್ಲಿ ಘಟಪ್ರಭಾ ಮಾಸ್ ಇನ್ಫೋಸಿಸ್ ಪೌಂಡೇಶನ್ ದಿಂದ ಪಿಯುಸಿ ಮತ್ತು ಪದವಿ ಓದುತ್ತಿರುವ ತಾಲೂಕಿನ ದಲಿತ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಒಳ್ಳೆಯ ನಾಗರಿಕ ಸೇವೆಗಳನ್ನು ಪಡೆದುಕೊಳ್ಳಬೇಕು ಮತ್ತು ನಮ್ಮ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುವ ಎಲ್ಲ ಶಿಕ್ಷಣದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮತ್ತು ನಮ್ಮ ಸಂಸ್ಥೆಯ ಪರವಾಗಿ ಬಡ ದಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನಿಧಿಯನ್ನು ಕೊಡಲಾಗುವುದು ಅದನ್ನು ಸಹ ಪಡೆದುಕೊಂಡು ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡು ಸಮುದಾಯ ಹಾಗೂ ತಮ್ಮ ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಅತಿಥಿಗಳಾಗಿ ಸಹಲೆಕ್ಕಾಧಿಕಾರಿ ಕಾಳಿಕಾ ಬಡಿಗೇರ, ಮಾರ್ಗದರ್ಶಕ ಮೋಹನ್ ಕಾಂಬಳೆ ಆಗಮಿಸಿದ್ದರು. ಬಾಹುಸಾಹೇಬ ಸಾಮನೆ ಸ್ವಾಗತಿಸಿದರು, ಅನಿಲ್ ಈರಗಾರ ವಂದಿಸಿದರು.