ಇಟಲಿಯಲ್ಲಿ ಜನಸಮೂಹದ ಮೇಲೆ ಹರಿದ ಕಾರು: 6 ಸಾವು

ರೋಮ್, ಜನವರಿ 6 (ಕ್ಸಿನ್ಹುವಾ) ಇಟಲಿಯ ಆಲ್ಟೊ ಅಡಿಜ್ ಪ್ರದೇಶದ ಬೊಲ್ಜಾನೊ ಬಳಿ ಜರ್ಮನ್ ಪ್ರವಾಸಿಗರ ಗುಂಪಿನ ಮೇಲೆ  ಕಾರು ಹರಿದ  ಪರಿಣಾಮ 6 ಜನ ಮೃತಪಟ್ಟು, ಇತರೆ 11 ಮಂದಿ ಗಾಯಗೊಂಡಿದ್ದಾರೆ.ವರದಿಗಳ ಪ್ರಕಾರ, ಸ್ಕೀಯಿಂಗ್‌ಗೆ ಜನಪ್ರಿಯವಾಗಿರುವ ಪ್ರದೇಶವಾದ ಅಹರ್ಂಟಾಲ್ ಕಣಿವೆಯ  ಲುಟಾಗೊ ಎಂದು ಕರೆಯಲ್ಪಡುವ ಪಟ್ಟಣದಲ್ಲಿ  ಮುಂಜಾನೆ  ಈ ಘಟನೆ ಜರುಗಿದೆ. 

ನಾಟಕೀಯ ಅಪಘಾತದಲ್ಲಿ ಆರು ಯುವಕರು ಪ್ರಾಣ ಕಳೆದುಕೊಂಡು  ಹಲವಾರು ಜನರು ಗಾಯಗೊಂಡರು" ಎಂದು ಇಟಾಲಿಯನ್ ರೆಡ್ ಕ್ರಾಸ್ ಟ್ವೀಟ್ ಮಾಡಿದೆ.28 ವರ್ಷದ ಸ್ಥಳೀಯ ವ್ಯಕ್ತಿ   ಅತಿ ವೇಗದಲ್ಲಿ ಕುಡಿದು  ವಾಹನ ಚಲಾಯಿಸಿದ್ದೇ ಈ ದುರಂತಕ್ಕೆ ಕಾರಣ ಎಂದೂ ಹೇಳಲಾಗಿದೆ. ಘಟನೆಯ ಬಳಿಕ  ಆತನನ್ನು ಬಂಧಿಸಲಾಗಿದೆ ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ಎನ್‌ಎಸ್‌ಎ ವರದಿ ಮಾಡಿದೆ,  ಒಟ್ಟು  160 ಮಂದಿ ರಕ್ಷಕರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದೂ  ಆರ್‌ಎಐ ವರದಿ ಮಾಡಿದೆ. ಗಾಯಗೊಂಡವರಲ್ಲಿ  ಒಬ್ಬನಿಗೆ ತುಂಬಾ ಗಂಭೀರ ಗಾಯವಾಗಿದ್ದು  ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದೂ  ಆರ್‌ಎಐ ತಿಳಿಸಿದೆ.