ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ಕಾರವಾರ 21: ಮಹಾತ್ಮಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ತಯಾರಿಕೆಗಾಗಿ ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಉದ್ಯೋಗಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ನಡೆಸುವ ಮೂಲಕ ಗ್ರಾಮಸ್ಥರಿಂದ ಕೂಲಿ ಹಾಗೂ ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಂಗ್ರಹಿಸಿ ನರೇಗಾ ಕುರಿತ ಅಗತ್ಯ ಮಾಹಿತಿ ನೀಡಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಮಾತನಾಡಿ, ನರೇಗಾ ಯೋಜನೆಗೆ ಈಗ ಡಿಜಿಟಲ್ ಟಚ್ ನೀಡಿದ್ದು, ಪ್ರತಿಯೊಬ್ಬರೂ ಬೆರಳ ತುದಿಯಲ್ಲೇ ಆನ್‌ಲೈನ್ ಮೂಲಕ ಕ್ಯೂಆರ್‌ಕೋಡ್ ಬಳಸಿ ಸರಳವಾಗಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು. ಆದ್ದರಿಂದ ಎಲ್ಲರೂ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ನರೇಗಾದಡಿ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಕೂಡಲೇ ಬೇಡಿಕೆ ಸಲ್ಲಿಸಬೇಕು ಎಂದರು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ಸಾರ್ವಜನಿಕ ಕಾಮಗಾರಿಗಳಲ್ಲಿ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸಲಾಗುತ್ತಿದ್ದು, ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ದಿನಕ್ಕೆ 349 ರೂ. ಕೂಲಿ ಹಣವನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಮೊಬೈಲ್ ಮೂಲಕ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಜಿಲ್ಲಾ ಐಇಸಿ ಸಂಯೋಜಕ ಫಕೀರ್ಪತುಮ್ಮಣ್ಣನವರ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಮಂಕಾಳಿ ಸಿದ್ದಿ, ಹನುಮಾ ಗೌಡಾ, ಪ್ರಶಾಂತ ನಾಯ್ಕ, ಪಿಡಿಒ ವಿಠ್ಠಲ ಬಾಂದಿ, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ಚಂದ್ರುಗೌಡ, ಗುರುಪ್ರಸಾದ ಹೆಗಡೆ, ಸೋಷಿಯಲ್ ಆಡಿಟ್‌ನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಗೀತಾ ಗಾಂವಕರ್, ಡಿಆರ್‌ಎಫ್‌ಒ ಪ್ರಶಾಂತ ಪಟಗಾರ, ಕ್ಲರ್ಕ್ ಕಂ ಡಿಇಒ ರಂಜಿತಾ ಪಟಗಾರ, ಬಿಲ್ ಕಲೆಕ್ಟರ್ ಚಂದ್ರೇಶಗೌಡ, ಮೇಟ್ ವಿಜ್ಞೇಶ ಪಟಗಾರ, ನಾಗರಾಜ್ ನಾಯ್ಕ, ವಿಆರ್‌ಡಬ್ಲ್ಯು ನೀತಾ ಗಾಂವಕರ, ಎನ್‌ಆರ್‌ಎಲ್‌ಎಂ ಯೋಜನೆಯಡಿ ಕಾರ್ಯನಿರ್ವಹಿಸುವ ವಿವಿಧ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.