ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಕರೆ

ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಕರೆ Call to celebrate festivals in peace and harmony

ಲೋಕದರ್ಶನ ವರದಿ 

ಜಮಖಂಡಿ 25: ಬಕ್ರೀದ್ ಹಬ್ಬ ಮತ್ತು ಹಜರತ್ ಸೈಯದ್ ಅಬುಬಕರ್ ದರ್ಗಾ ಉರುಸ್ ಎರಡು ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಆಚರಿಸಬೇಕು ಎಂದು ಡಿಎಸ್‌ಪಿ ಎಸ್, ಸೈಯದ್ ರೋಷನ್ ಜಮೀರ ಹೇಳಿದರು.  

ನಗರ ಶಹರ ಪೋಲಿಸ್ ಠಾಣೆಯ ಸಭಾ ಭವನದಲ್ಲಿ ನಡೆದ ಬಕ್ರೀದ್ ಹಬ್ಬ ಹಾಗೂ ಹಜರತ್ ಸೈಯದ್ ಅಬುಬಕರ್ ದರ್ಗಾ ಉರಸ್ ನಿಮಿತ್ತ ಎಲ್ಲ ಸಮಾಜದ ಮುಖಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಮಖಂಡಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ನಗರದಲ್ಲಿ ಎಲ್ಲ ಸಮಾಜಗಳ ಹಬ್ಬ, ಹರಿದಿನಗಳು, ಜಾತ್ರೆ, ಉರುಸ್‌ಗಳನ್ನು ಎಲ್ಲರೂ ಸೇರಿ ಆಚರಿಸುತ್ತಾ ಬಂದಿರುವುದು ವಿಶೇಷತೆಯಾಗಿದೆ. ಇಂದಿನ ಯುವಜನಾಂಗ ಅದನ್ನು ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದರು.  

ಬಕ್ರೀದ್ ಹಬ್ಬ ತ್ಯಾಗದ ಸಂಕೇತವಾಗಿದೆ. ಹಬ್ಬದ ದಿನ ಬಲಿ ನೀಡಿದ್ದನ್ನು ಮೂರು ಭಾಗ ಮಾಡಲಾಗುತ್ತದೆ. ತಮ್ಮ ಮನೆಯ ಕುಟುಂಬಸ್ಥರಿಗೆ, ಬಡವರಿಗೆ, ಸ್ನೇಹಿತ ಬಂಧುಗಳಿಗೆ ಹಂಚಲಾಗುತ್ತದೆ. ಎಂದಿನಂತೆ ಎಲ್ಲ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು.ಇಲಾಖೆಯೊಂದಿಗೆ ಸಹಕರಿಸಬೇಕು. ಸೈಯದ್ ಅಬುಬಕರ್ ದರ್ಗಾ ಉರುಸ್ 3 ದಿನಗಳ ಕಾಲ ನಡೆಯಲಿದ್ದು, ಪದಾಧಿಕಾರಿಗಳು ಇಲಾಖೆಯೊಂದಿಗೆ ಸಹಕರಿಸಬೇಕು ಹಾಗೂ ರಸ್ತೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಜರುಗಿಸಲಾಗುತ್ತದೆ ಎಂದರು. 

ವಿವಿಧ ಸಮಾಜದ ಮುಖಂಡರಾದ ರಾಕೇಶ್ ಲಾಡ್, ತೌಫಿಕ್ ಪಾರ್ಥನಳ್ಳಿ, ಪ್ರದೀಪ ಮೆಟಗುಡ್ಡ, ಅಬುಬಕರ ಕುಡಚಿ, ಗಣೇಶ ಶಿರಗಣ್ಣವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಹರ ಪೋಲಿಸ್ ಠಾಣೆಯ ಪಿಎಸ್‌ಐ, ಅನೀಲ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ್ ಮೋಮಿನ್, ಚಿತ್ತದುರ್ಗ ಸಿಪಿಐ ವಿಶ್ವನಾಥ ವೇದಿಕೆಯಲ್ಲಿ ಇದ್ದರು. ಹಿಂದು-ಮುಸ್ಲಿಂ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.