ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಸಮ್ಮೇಳನ; ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ಟೀಕೆ

ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಸಮ್ಮೇಳನ; ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ಟೀಕೆ  CPI(ML) Liberation District Conference; Sharp criticism of BJP and RSS

ರಾಯಚೂರು 11: ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ಹಿಂದೂ ರಾಷ್ಟ್ರದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದು, ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ’ರೋಜಾರಿಯೊ ಆರೋಪಿಸಿದರು.  

ನಗರದ ಶರಣ ಮಾದಾರ ಚನ್ನಯ್ಯ ಭವನ (ಟೌನ್ಹಾಲ್)ದಲ್ಲಿ ಶನಿವಾರ ನಡೆದ ಪಕ್ಷದ 2ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳ ಪರಿಣಾಮ ಕಾರ್ಮಿಕರ ಹಕ್ಕುಗಳು ದುರ್ಬಲಗೊಳ್ಳುತ್ತಿವೆ ಎಂದು ಹೇಳಿದರು.  

"ಆಡಳಿತ ನಡೆಸುತ್ತಿರುವವರು ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ಅನುಕೂಲವಾಗುವ ನೀತಿಗಳಿಂದ ಸಾರ್ವಜನಿಕ ಆಸ್ತಿಗಳು ಖಾಸಗೀಕರಣಗೊಳ್ಳುತ್ತಿವೆ. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲಾಗುತ್ತಿದೆ" ಎಂದು ಅವರು ಆರೋಪಿಸಿದರು.  

ಕೇಂದ್ರ ಸರ್ಕಾರದ ಆಡಳಿತದಲ್ಲಿ ದೇಶದಲ್ಲಿ ಫ್ಯಾಸಿಸ್ಟ್‌ ಪ್ರವೃತ್ತಿಗಳು ಹೆಚ್ಚಾಗುತ್ತಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಉಳಿಸಲು ಸಾರ್ವಜನಿಕರು ಸಂಘಟಿತರಾಗಿ ಹೋರಾಡಬೇಕು ಎಂದು ಅವರು ಕರೆ ನೀಡಿದರು.  

ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ದೇಶದ ದುಡಿಯುವ ವರ್ಗ ಸಂಕಷ್ಟದಲ್ಲಿದ್ದು, ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದರು. "ಈ ಪ್ರಕ್ರಿಯೆ ನಾಗರಿಕರ ಮತದಾನದ ಹಕ್ಕಿನ ಮೇಲೆ ದಾಳಿ ನಡೆಸುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ" ಎಂದು ಹೇಳಿದರು.