ಸಿಎಂ ಸಿದ್ದರಾಮಯ್ಯ ಜನಪರ ಇದ್ದಾರೆ, ಇಲ್ಲಿನ ಸಮಸ್ಯೆ ಪರಿಹರಿಸಲಿ : ಭಗವಾನ್

ಸಿಎಂ ಸಿದ್ದರಾಮಯ್ಯ ಜನಪರ ಇದ್ದಾರೆ, ಇಲ್ಲಿನ ಸಮಸ್ಯೆ ಪರಿಹರಿಸಲಿ : ಭಗವಾನ್ CM Siddaramaiah is pro-people, let the problem here be solved: Bhagwan

         ಕೊಪ್ಪಳ 13:  ನಾನು ಹಳ್ಳಿಗ ರೈತರ ಎಲ್ಲ ಕೆಲಸ ಮಾಡಿದವನು. ರೈತರು ಬೂದಿ, ಹೊಗೆಯಲ್ಲಿ ಹೇಗೆ ಬದುಕಬೇಕು? ಇಡೀ ರಾಜ್ಯದ ಜನರಿಗೆ ವಿಷಯ ತಿಳಿಸುವಂತೆ ಪತ್ರಿಕಾ ಹಾಗೂ ಟಿವಿ ಮಾಧ್ಯಮದವರು ಪೂರ್ಣ ಪ್ರಯತ್ನ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ. ಎಸ್‌. ಭಗವಾನ್ ಕೋರಿದರು. ಅವರು ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ್ ಸುಮಿ, ಎಕ್ಸ್‌ ಇಂಡಿಯಾ, ತನುಷ್, ದೃವದೇಶ ಸೇರಿದಂತೆ ಅನೇಕ ಪರಿಸರ ಮಾರಕ ಕಾರ್ಖಾನೆ ವಿರೋಧಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ 75ನೇ ದಿನ ಅಮೃತೋತ್ಸವದಲ್ಲಿ ಭಾಗವಹಿಸಿದ ಮಾತನಾಡಿದರು. 

ಮುಖ್ಯ ಮಂತ್ರಿಯವರನ್ನು ಕಂಡು ವಿಷಯ ತಿಳಿಸುತ್ತೇನೆ. ನೀವೂ ಮುಖ್ಯಮಂತ್ರಿಗಳನ್ನು ಕಂಡು ವಿಷಯ ಮನವರಿಕೆ ಮಾಡಿಕೊಡಬೇಕೆಂದು ಹೇಳಿದ್ದಲ್ಲದೆ ಸ್ವತಃ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಮುಂತಾದ ಗ್ರಾಮಗಳಿಗೆ ಭೇಟಿಕೊಟ್ಟು ರೈತರು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರೊಂದಿಗೆ ಸಂವಾದ ನಡೆಸಿದರು. ಸರಕಾರ ವಿಶೇಷವಾಗಿ ಮುಖ್ಯಮಂತ್ರಿಗಳು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ, ಅವರು ಬಾಧಿತ ಹಳ್ಳಿಗಳಿಗೆ ಭೇಟಿ ಕೊಡುವಂತೆ ಮನವರಿಕೆ ಮಾಡುವೆ, ಇಲ್ಲಿನ ಪರಿಸ್ಥಿತಿ ವಿವರಿಸುವೆ, ಈಗ ಇರುವ ಕಾರ್ಖಾನೆಗಳ ಸಂಕಷ್ಟವನ್ನೇ ತಡೆದುಕೊಳ್ಳಲು ಆಗಲ್ಲ, ಇನ್ನಷ್ಟು ಬಂದರೆ ಇಲ್ಲಿನ ಗತಿಯೇನು ಎಂದು ಪ್ರಶ್ನಿಸಿದರು. ಅಲ್ಲದೇ ರಾಜ್ಯದಲ್ಲಿ ಸಂಪರ್ಕದ ಕೊರತೆ ಇದೆ, ಇಲ್ಲಿ ನಡೆಯುವ ಸಮಸ್ಯೆ ಬೆಂಗಳೂರು ತಲುಪವುದೇ ಇಲ್ಲ, ಆದ್ದರಿಂದ ಹೋರಾಟಗಾರರ ನಿಯೋಗದ ಜೊತೆಗೆ ಸಿಎಂ ಭೇಟಿ ಮಾಡುವೆ ಹಾಗೂ ವಿಧಾನಸೌಧಕ್ಕೆ ಹೋರಾಟವನ್ನು ತಲುಪಿಸೋಣ ಎಂದರು. 

ಕೃಷಿ ಬೆಲೆ ಆಯೋಗದ ಸದಸ್ಯ ಡಿ. ಹೆಚ್‌. ಪೂಜಾರ ಮಾತನಾಡಿ, ಶಾಸಕರು ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟದ ಕಡೆಗೆ ಸೌಜನ್ಯದ ಭೇಟಿ ಸಹ ಮಾಡಿಲ್ಲ, ಕ್ಷೇತ್ರದ ಜನರ ಜೀವನ, ಉಸಿರು, ಬದುಕು ಮತ್ತು ಕೃಷಿ ಮುಖ್ಯ ಎನ್ನಬೇಕೆ ಹೊರತು ಪಲಾಯನವಾದ ಮಾಡಬಾರದು ಎಂದ ಅವರು ಹೋರಾಟವನ್ನು ಅತೀ ಶೀಘ್ರದಲ್ಲೇ ರಾಜಕ್ಕೆ ವಿಸ್ತರಿಸಲಾಗುವದು ಎಂದರು. 

ಹಿರಿಯ ವಕೀಲ ರಾಜು ಬಾಕಳೆ ಮಾತನಾಡಿ, ಕಾರ್ಖಾನೆ ಆರಂಭದ ಹಂತದಲ್ಲೇ ನ್ಯಾಯಾಲಯ ಮತ್ತು ರೈತರ ಬಲಪ್ರಯೋಗದಿಂದಲೂ ಸಹ ಅಂದು ಭೂಮಿ ಕಸಿದುಕೊಳ್ಳುವದನ್ನು ತಡೆಯಲು ಪ್ರಯತ್ನ ಮಾಡಿವಿ, ದಶಕಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ ಸೋತಿವಿ, ಆದರೆ ಈಗ ಜನಸಂಗ್ರಾಮದ ಮೂಲಕ ಗೆಲವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ, ಗವಿಶ್ರೀಗಳ ಆಶೀರ್ವಾದ ಸಹ ನಮಗಿದೆ ಎಂದು ಭಾವಿಸಿದ್ದೇವೆ, ಸಂಸದರು ನಮ್ಮ ಪರವಾಗಿ ಮಾತನಾಡಿದ್ದಾರೆ, ಕಾರ್ಖಾನೆ ಬೇಕು ಎಂದು ಹೋರಾಡುವವರನ್ನು ಭೇಟಿ ಮಾಡಿ ಭೂಮಿ ಮರಳಿ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದು ಬಲ ತಂದಿದೆ ಎಂದರು. 

ರೈತ ಮಹಿಳೆ ಗಿರಿಯಮ್ಮ ಕುಣಿಕೇರಿ ಮತ್ತು ಹಾಲವರ್ತಿಯ ಕೃಷಿಕ ಮಾರ್ಕಂಡಯ್ಯ ಹಿರೇಮಠ ಮಾತನಾಡಿ, ಹೋಗೆ ಕಪ್ಪು ಧೂಳು ವಿಷ ತುಂಬಿದ ನೀರಿನ ಕಾಟಕ್ಕೆ ಮನೆ ಹೊಲ ಮಾರಿ ಊರು ಬಿಡುವಂತಾಗಿದೆ, ಆದರೆ ಬದುಕಿ ಬಾಳಿದ ಊರು ಬಿಡುವ ಮನಸ್ಸಿಲ್ಲ, ಇದೇ ಕಾರಣಕ್ಕೆ ಇಲ್ಲಿನ ಹಿರಿಯರ ಆರೋಗ್ಯ ಕೆಟ್ಟಿದೆ, ಮಕ್ಕಳು ಸದಾ ಕೆಮ್ಮು ಧಮ್ಮು ಎನ್ನುತ್ತಿದ್ದರೆ ಬಹುತೇಕರಿಗೆ ಅಸ್ತಮಾ ಇದೆ, ಹಲವರಿಗೆ ಕ್ಯಾನ್ಸರ್ ಇದೆ ಎಂದು ಭಾವುಕರಾದರು. ಇದೇ ವೇಳೆ ಕಾರ್ಖಾನೆ ಬೇಕು ಎಂದು ಹೋರಾಡುತ್ತಿರುವವರು ರೈತರೇ ಅಲ್ಲ ಅವರಲ್ಲಿ ಅನೇಕರು ಕಾರ್ಖಾನೆ ಕಾರ್ಮಿಕರು ಮತ್ತು ಗುತ್ತಿಗೆದಾರರು, ಬಾಧಿತ ಹಳ್ಳಿಯ ಯಾವ ಜನರಿಗೂ ಕಾರ್ಖಾನೆಗಳು ಬೇಕಿಲ್ಲ ಎನ್ನಲು ಮರೆಯಲಿಲ್ಲ. ದದೇಗಲ್ ಸದ್ಗುರು ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಪರಿಸರ ಉಳಿವಿಗೆ ಎಲ್ಲರೂ ಸಂಕಲ್ಪ ಮಾಡೋಣ, ಜನರಿಗಾಗಿ ಹೋರಾಡೋಣ, ಜನಪ್ರತಿನಿಧಿಗಳು ನಮ್ಮ ಕೂಗು ಕೇಳಿ ಎಂದರು. 

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿಗಳಾದ ಎಚ್‌.ಎಸ್‌. ಪಾಟೀಲ್, ಎ. ಎಂ. ಮದರಿ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್‌. ಪೂಜಾರ, ರಾಜು ಬಾಕಳೆ, ರಾಜ್ಯ ರೈತ ಸಂಘದ ಮುಖಂಡರಾದ ನಜೀರಸಾಬ್ ಮೂಲಿಮನಿ, ಭೀಮಸೇನ ಕಲಕೇರಿ,  ಮಹಿಳಾ ನಾಯಕಿಯರಾದ ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ, ಖಾಸಗಿ ಶಾಲಾ ಆಡಳಿತ ಮಂಡಳಿ ಕುಸುಮ ಸಂಘಟನೆಯ ಅಧ್ಯಕ್ಷ ಶಾಯೀದ್ ತಹಶೀಲ್ದಾರ, ದಾನಪ್ಪ ಕವಲೂರು, ಅಲೀಮುದ್ದಿನ್, ಸುರೇಶ ಕುಂಬಾರ, ಮುಖಂಡರಾದ ಶುಕರಾಜ ತಾಳಕೇರಿ, ಮಂಜು ಹಾಲವರ್ತಿ, ರಂಗ ಕಲಾವಿದೆ ಎಚ್‌. ಬಿ. ಸರೋಜಮ್ಮ, ಎಸ್‌.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಪ್ರಾಚಾರ್ಯ ಎಲ್‌.ಎಫ್‌. ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಗಡ್ಡಿ, ರವಿ ಕಾಂತನವರ, ಗವಿಸಿದ್ದಪ್ಪ ಹಲಿಗಿ, ಜಿ. ಎಸ್‌. ಕಡೇಮನಿ, ಮಹಾದೇವಪ್ಪ ಮಾವಿನಮಡು, ಬಸವರಾಜ ನರೇಗಲ್, ಯಮನೂರ​‍್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ, ಮಂಜುನಾಥ ಕವಲೂರು, ಸಿ. ಬಿ. ಪಾಟೀಲ್, ಸುಂಕಪ್ಪ ಮೀಸಿ, ಮಲ್ಲಪ್ಪ ಮಾ. ಪಾ., ಗಣೇಸ ವಿಶ್ವಕರ್ಮ, ಸುರೇಶ ಪೂಜಾರ, ಸದಾಶಿವ ಪಾಟೀಲ್ ಸೇರಿ ನೂರಾರು ಜನರು ಪಾಲ್ಗೊಂಡರು.