ಸಿಎಂ ಭೇಟಿ ಮಾಡಿದ ಎಚ್‌.ಡಿ.ರೇವಣ್ಣ: ಆಲೂಗಡ್ಡೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಬೆಂಗಳೂರು, ಏ.15, ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಇಂದು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಲೂಗಡ್ಡೆ ಬೆಳಗಾರರ ಸಮಸ್ಯೆಯ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಮತ್ತು ಹಾಸನ ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟಕ್ಕಾಗಿ ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಿದರು.ಭೇಟಿ ಬಳಿಕ ಎಚ್.ಡಿ.ರೇವಣ್ಣ  ಮಾತನಾಡಿ, ಸರ್ಕಾರ ಪ್ರತಿ ತಾಲೂಕಿಗೆ ಕೊರೊನಾಕ್ಕಾಗಿ ಕೇವಲ 2 ಲಕ್ಷ ರೂ. ಅನುದಾನ  ನೀಡಿದೆ. ಬಡವರು, ನಿರ್ಗತಿಕರಿಗೆ ಒಂದು ದಿನದ ಊಟ ನೀಡಲು ಸಹ ಈ ಹಣ‌  ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆ  ಇದೆ‌. ಎಸ್‌ಡಿಆರ್‌ಎಫ್‌ನಲ್ಲಿರುವ ಅನುದಾನ ಬಳಕೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕು  ಎಂದರು.
ಹಾಸನ ಜಿಲ್ಲೆಯಿಂದ ವಲಸೆ ಹೋಗಿದ್ದ ಕಾರ್ಮಿಕರು ಮತ್ತೆ ಜಿಲ್ಲೆಗೆ  ಕೊರೋನಾದಿಂದಾಗಿ ವಾಪಾಸಾಗಿದ್ದಾರೆ. ಜಿಲ್ಲೆಗೆ ವಾಪಸಾಗಿರುವ ಕಾರ್ಮಿಕರಿಗೆ ಪಡಿತರ  ಚೀಟಿಗಳಿಲ್ಲ. ಇಂತಹ ಕುಟುಂಬಗಳಿಗೆ ಪಡಿತರ ಒದಗಿಸಬೇಕು. ಮೆಸನ ಮೆಡಿಕಲ್ ಕಾಲೇಜಿಗೆ  ಟೆಸ್ಟ್‌ ಕಿಟ್ ಹಾಗೂ ಪಿಪಿ ಕಿಟ್ ಒದಗಿಸಬೇಕು. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು,  ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಬೇಕು. ಆಲೂಗಡ್ಡೆ ಬಿತ್ತನೆ ಬೀಜದ ಅವಶ್ಯಕತೆ  ಇದೆ. ಜಿಲ್ಲೆಯಲ್ಲಿ 35000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ  ಬೀಜ ಹಾಗೂ ಔಷಧಿಗಾಗಿ 55 ಕೋಟಿ ಮೀಸಲಿಡಲು ಮನವಿ ಮಾಡಿರುವುದಾಗಿ ರೇವಣ್ಣ ಹೇಳಿದರು.
ರಾಜ್ಯದಲ್ಲಿ ಆಲೂಗಡ್ಡೆ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮುಂಗಾರು ಮತ್ತು ಹಿಂಗಾರು ಋತುಮಾನ ಸೇರಿದಂತೆ ಅಂದಾಜು 35000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು 43570 ಮೆಟ್ರಿಕ್ ಟನ್ ಆಲೂಗಡ್ಡೆ  ಬಿತ್ತನೆ ಬೀಜ ಅಗತ್ಯವಿರುತ್ತದೆ. ಈ ಬೆಳೆಯು ಪ್ರಮುಖವಾಗಿ ಮುಂಗಾರು  ಹಂಗಾಮಿನಲ್ಲಿ ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.ಆಲೂಗಡ್ಡೆ ಬೆಳೆಗೆ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಬಿತ್ತನೆ ಬೀಜಕ್ಕೆ ಶೇಕಡಾ 30ರಿಂದ 40ರಷ್ಟು ವೆಚ್ಚವನ್ನು ವ್ಯಯಿಸಬೇಕಾಗುತ್ತದೆ. ಆಲೂಗಡ್ಡೆ ಬೆಳೆಯು ಹಲವಾರು ರೋಗ ಮತ್ತು ಕೀಟಗಳಿಗೆ ತುತ್ತಾಗುವ ಬೆಳೆಯಾಗಿದ್ದು, ಅಂಗಮಾರಿ ರೋಗ, ದುಂಡಾಣು ರೋಗ, ನಂಜು ರೋಗ ಹಾಗೂ ನುಸಿ ಕೀಟ ಬಾಧೆ ಆಲೂಗಡ್ಡೆ ಬೆಳೆಗೆ ಹೆಚ್ಚಾಗಿ ಬಾಧಿಸುತ್ತಿರುವುದರಿಂದ ಬೆಳೆ ಹಾನಿಯಾಗುತ್ತಿರುವ ಕಾರಣ ಆಲೂಗಡ್ಡೆ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಳೆ ನಷ್ಟದ ಜೊತೆಗೆ 2019-20ನೆ ಮುಂಗಾರು ಹಂಗಾಮಿನಲ್ಲಿ ಬಿದ್ದ ಅತಿಯಾದ ಮಳೆಯಿಂದಾಗಿ ಆಲೂಗೆಡ್ಡೆ ಬೆಳೆಯು ಹಾನಿಗೊಳಗಾಗಿ ತೀವ್ರ  ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಈ ಬೇಸಿಗೆ ಹಂಗಾಮಿನಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳನ್ನು ಕೊರೋನಾ ಕೋವಿಡ್‌ 19 ವೈರಸ್‌ ಸೋಂಕಿನಿಂದಾಗಿ ಇಡೀ ದೇಶವನ್ನೇ ಬಂದ್ ಮಾಡಲಾಗಿರುವುದರಿಂದ ಸರಿಯಾಗಿ ಮಾರುಕಟ್ಟೆ ಲಭ್ಯವಿಲ್ಲದೆ ಹಾಗೂ ಸಾಗಾಣಿಕೆ ತೊಂದರೆಗಳಿಂದಾಗಿ ಪ್ರಸಕ್ತ ವರ್ಷದಲ್ಲಿ ರೈತರು ತೀವ್ರತರವಾದ ನಷ್ಟವನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಳೆಗಾರರ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಆಲೂಗಡ್ಡೆ ಬೆಳೆ ಬೇಸಾಯದಲ್ಲಿ ತೊಡಗಿರುವ ರೈತರಿಗೆ ಶೇಕಡಾ 50ರಷ್ಟು ಬಿತ್ತನೆ ಬೀಜ ಮತ್ತು ಸಸ್ಯ ಸಂರಕ್ಷಣಾ ಔಷಧಗಳ ಖರೀದಿಗಾಗಿ ಸಹಾಯಧನ ಸೌಲಭ್ಯವನ್ನು  ಒದಗಿಸುವುದ ಸೂಕ್ತವೆಂದು ಅಭಿಪ್ರಾಯಿಸಿ ಪ್ರತಿ ಹೆಕ್ಟೇರ್‌ ಬಿತ್ತನೆ ಬೀಜಕ್ಕೆ ಅಂದಾಜು 15000 ಮತ್ತು ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗೆ 15000 ರೂ.ವೆಚ್ಚವಾದರೆ ಪ್ರತಿ ಹೆಕ್ಟೇರ್‌ ಆಲೂಗೆಡ್ಡೆ ಬಿತ್ತನೆ ಹಾಗೂ ಸಸ್ಯ ಸಂರಕ್ಷಣೆಗಾಗಿ ಒಟ್ಟು 3000 ರೂ.ವೆಚ್ಚವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ ಈ ವೆಚ್ಚದ ಶೇಕಡಾ 50ರಷ್ಟು ವೆಚ್ಚವನ್ನು ಆಲೂಗಡ್ಡೆ ಬೆಳೆಗಾರರಿಗೆ ಸರ್ಕಾರವು ಭರಿಸಿದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ವೆಚ್ಚ ಸೇರಿದಂತೆ ಅಂದಾಜು 55 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.
ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ 2019-2020ನೇ ಸಾಲಿನಲ್ಲಿ ಆಲೂಗಡ್ಡೆ ಬೆಳೆಗಾರರಿಗೆ ಪ್ರೋತ್ಸಾಹ ಧನ ಯೋಜನೆಯ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗಿತ್ತು. ಇದೇ ರೀತಿ 2020-21ನೆ ಸಾಲಿನಲ್ಲಿ ರಾಜ್ಯಾದ್ಯಂತ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಈ ಕಾರ್ಯಕ್ರಮವನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಬಿತ್ತನೆ ಬೀಜ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳು ಸಮಯಕ್ಕೆ ಸರಿಯಾಗಿ ರೈತರಿಗೆ ಲಭ್ಯವಿರುವಂತೆ ಕ್ರಮಕೈಗೊಳ್ಳಬೇಕಾಗಿರುವುದರಿಂದ ಈ ಯೋಜನೆಗೆ ಅನುಮೋದನೆ ನೀಡುವುದರೊಂದಿಗೆ 55 ಕೋಟಿ ರೂ.ಗಳ ಅನುದಾನವನ್ನು ರಾಜ್ಯದ ಆಲೂಗಡ್ಡೆ ಬೆಳೆ ಬೆಳೆಗಾರರ ಹಿತದೃಷ್ಟಿಯಿಂದ ತೋಟಗಾರಿಕೆ ಇಲಾಖೆಗೆ ತುರ್ತಾಗಿ ಒದಗಿಸಬೇಕಾಗಿ ಈ ಮೂಲಕ ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.