ಸಂಕಷ್ಟದಲ್ಲಿರುವ ಆಟೋ ರಿಕ್ಷಾ ಚಾಲಕರ ನೆರವಿಗ ಧಾವಿಸಲು ಸರ್ಕಾರಕ್ಕೆ ಸಿಐಟಿಯು ಒತ್ತಾಯ

ಬೆಂಗಳೂರು, ಏ.15, ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಆಟೋರಿಕ್ಷಾ ಚಾಲಕರಿಗೆ ಅವಶ್ಯವಿರುವ ದಿನಸಿ, ಆಹಾರ ಸಾಮಾಗ್ರೀಗಳನ್ನು  ಕೂಡಲೇ ನೀಡಲು ಕ್ರಮ ವಹಿಸಬೇಕು. ಮನೆ ಬಾಡಿಗೆ, ಔಷಧಿ ಹಾಗೂ ತರಕಾರಿ, ದಿನಸಿ ಸಾಮಾಗ್ರೀ  ಖರ್ಚಿಗಾಗಿ 6 ಸಾವಿರ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೀಡಬೇಕು ಎಂದು ಆಟೋ ರಿಕ್ಷಾ  ಡ್ರೈವರ್ ಯೂನಿಯನ್‌ (ಸಿಐಟಿಯು) ಅಧ್ಯಕ್ಷರಾದ ಮೀನಾಕ್ಷಿ ಸುಂದರಂ ಒತ್ತಾಯಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ನಗರದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಆಟೋರಿಕ್ಷಾಗಳಿದ್ದು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ರಿಕ್ಷಾಗಳನ್ನು ನಂಬಿಕೊಂಡು ಚಾಲಕರು ಮತ್ತು ಅವರ ಕುಟುಂಬ ವರ್ಗದವರು ಸೇರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಬದುಕು ಕಟ್ಟಿಕೊಂಡು ಬೆಂಗಳೂರು ನಗರದಲ್ಲಿ ವಾಸಮಾಡುತ್ತಿದ್ದಾರೆ.
ಈಗಾಗಲೇ, ದುಬಾರಿ ಬಾಡಿಗೆ, ದುಬಾರಿ ಬಡ್ಡಿ, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸದಿಂದಾಗಿ ಹೈರಾಣಾಗಿರುವ ಆಟೋ ಚಾಲಕರ ಕುಟುಂಬದವರು ಸರ್ಕಾರಗಳಿಂದ ಈ ವರ್ಗಕ್ಕೆ ಇಲ್ಲಿಯವರೆವಿಗೂ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡದೇ ವಂಚಿಸಿವೆ. ಬೆಂಗಳೂರು ನಗರದಲ್ಲಿ ಈ ದಿನದ ಸಂಪಾದನೆ, ಅದೇ ದಿನ ಮಾತ್ರ ಬದುಕಲು ಸಾಧ್ಯವಾಗಿದೆ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಈಗ ಕೊರೋನ ವೈರಸ್‌ನಿಂದ ಇಡಿ ಪ್ರಪಂಚವೇ ಬೆಚ್ಚಿ ಬಿದ್ದಿದೆ. ಲಕ್ಷಾಂತರ ಸಾವು ನೋವುಗಳು ಸಂಭವಿಸುತ್ತಿವೆ. ನಮ್ಮ ದೇಶದಲ್ಲಿಯು ಕೂಡ ಈ ವೈರಸ್ ಮಹಾಮಾರಿಯನ್ನು ಓಡಿಸಲು ಅಗತ್ಯ ಸೂಕ್ತ ಕ್ರಮ ತೆಗೆದುಕೊಂಡು ಲಾಕ್‌ಡೌನ್ ಮಾಡಿ ಜಾರಿ ಮಾಡಿದೆ. ನಮ್ಮ ರಾಜ್ಯ ಸರ್ಕಾರವು ಕೂಡ ಚಾಚು ತಪ್ಪದೆ ಜಾರಿಮಾಡಿ 25 ದಿವಸ ಕಳೆದಿದೆ. ನಂತರ ಮೇ 3 ರ ವರೆಗೆ ಆದೇಶ ಮಾಡಿ ಕಟ್ಟುನಿಟ್ಟಾಗಿ ಜಾರಿ ಮಾಡಿದೆ. ಈ ಜಾರಿಯಿಂದಾಗಿ ಜನಗಳು ಮನೆಯಿಂದ ಹೊರಗೆ ಬರದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕರು, ಕಡು ಬಡವರು ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ 2 ತಿಂಗಳು ಪಡಿತರ ನೀಡುತ್ತಿದ್ದರು. ಬೇರೆ ಖರ್ಚಿಗೆ (ತರಕಾರಿ, ದಿನಸಿ) ಹಣವಿಲ್ಲದಂತಾಗಿದೆ. ಈಗಾಗಲೇ ಆಟೋರಿಕ್ಷಾ ಚಾಲಕರಿಗೆ ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸರ್ಕಾರಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ಹಣವನ್ನು ಚಾಲಕರಿಗೆ ಸಹಾಯ ಮಾಡಿವೆ. ಅದೇ ರೀತಿ ದಿನಸಿ ಸಾಮಗ್ರೀ, ಆಹಾರಗಳನ್ನು, ಸರ್ಕಾರದಿಂದ ನೀಡಿ ಈ ಲಾಕ್‌ಡೌನ್ ನಿಂದ ಕುಟುಂಬಗಳಿಗೆ ಸಹಾಯಮಾಡಿದೆ.
ಅದೇ ರೀತಿ ಸಂಕಷ್ಟದಲ್ಲಿರುವ ಕರ್ನಾಟಕದ ಆಟೋರಿಕ್ಷಾ ಚಾಲಕರಿಗೆ ಈ ಕೂಡಲೇ ಸರ್ಕಾರ ಸಹಾಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಸಂಪೂರ್ಣ ವಿನಾಯಿತಿ ನೀಡಬೇಕು.  ಮನೆ ಬಾಡಿಗೆ, ವಾಹನಗಳ ಇಎಂಐ ಕಂತುಗಳು ಇನ್ನಿತರೇ ಖರ್ಚುಗಳನ್ನು ಮನ್ನಾ ಮಾಡಲು ಆದೇಶ ಜಾರಿ ಮಾಡಬೇಕು. ವಿದ್ಯುತ್ ಶುಲ್ಕ, ನೀರಿನ ಶುಲ್ಕ, 3 ತಿಂಗಳುಗಳ ಕಾಲ ಮನ್ನಾ ಮಾಡಬೇಕು.   ಈ ಸಂಕಷ್ಟದಿಂದ ಪಾರಾಗಲು 50 ಸಾವಿರ ಹಣವನ್ನು ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಸಾಲ ಸೌಲಭ್ಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.