ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಿಸಿಎಸ್‌ಆರ್ ಸಹಭಾಗಿತ್ವ ಅಗತ್ಯ: ಜಿಲ್ಲಾಧಿಕಾರಿ

ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಿಸಿಎಸ್‌ಆರ್ ಸಹಭಾಗಿತ್ವ ಅಗತ್ಯ: ಜಿಲ್ಲಾಧಿಕಾರಿ CCSR partnership essential for comprehensive development of government schools: Deputy Commissioner

ಲೋಕದರ್ಶನ ವರದಿ 

ಹಾವೇರಿ, ಜು.20: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಮುದಾಯ ಮತ್ತು ಕಾರ​‍್ೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೈಗಾರಿಕೆಗಳು ಹಾಗೂ ಕಾರ​‍್ೊರೇಟ್ ಸಂಸ್ಥೆಗಳು ಸಹಭಾಗಿಯಾಗಬೇಕೆಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಕರೆ ನೀಡಿದರು.  ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಿಸಿಎಸ್‌ಆರ್ ಯೋಜನೆ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ಖಾಸಗಿ ವಲಯ ಕೈಜೋಡಿಸಿದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಸರ್ಕಾರದ ಸಿಸಿಎಸ್‌ಆರ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಕರ್ನಾಟಕ ಪಬ್ಲಿಕ್ ಸ್ಕೂಲ್  ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಸ್ಮಾರ್ಟ್‌ ತರಗತಿಗಳು, ವಿಜ್ಞಾನ ಮತ್ತು  ಪ್ರಯೋಗಾಲಯಗಳು, ಗ್ರಂಥಾಲಯ, ಡಿಜಿಟಲ್ ಕಲಿಕಾ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಕ್ರೀಡಾ ಸೌಲಭ್ಯಗಳಂತಹ ಮೂಲಸೌಕರ್ಯಗಳನ್ನು ಕಾರ​‍್ೊರೇಟ್ ಸಂಸ್ಥೆಗಳ ಸಹಕಾರದಿಂದ ಅಭಿವೃದ್ಧಿಪಡಿಸಬಹುದಾಗಿದೆ ಎಂದು ತಿಳಿಸಿದರು.  ಪ್ರತಿ ಕೈಗಾರಿಕೆ ಅಥವಾ ಸಂಸ್ಥೆ ಕನಿಷ್ಠ ಒಂದು ಅಥವಾ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ರೂಪಿಸುವಂತೆ ಅವರು ಮನವಿ ಮಾಡಿದರು. ಸಿಸಿಎಸ್‌ಆರ್ ಅಡಿಯಲ್ಲಿ ಶಾಲೆ ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೆ ಶಾಲೆಗೆ ನಾಮಕರಣ ಮಾಡುವ ಅವಕಾಶವೂ ಸರ್ಕಾರ ನೀಡಿದೆ ಎಂದು ಹೇಳಿದರು.  

ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್  ಪರಿಕಲ್ಪನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಎಲ್ಕೆಜಿಯಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ಶಿಕ್ಷಣ, ದ್ವಿಭಾಷಾ ಬೋಧನೆ, ಕೌಶಲ್ಯಾಧಾರಿತ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್, ವಿಶೇಷ ವಿಷಯ ಶಿಕ್ಷಕರ ನೇಮಕ, ನಿರಂತರ ಕಲಿಕಾ ಮೌಲ್ಯಮಾಪನ ಸೇರಿದಂತೆ ಹಲವು ನವೀನ ಅಂಶಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು.  ಸಿಸಿಎಸ್‌ಆರ್ ಯೋಜನೆಯಡಿ ಹೊಸ ಶಾಲೆಗಳ ನಿರ್ಮಾಣ, ಹಾಲಿ ಶಾಲೆಗಳ ಉನ್ನತೀಕರಣ, ಡಿಜಿಟಲ್ ಮೂಲಸೌಕರ್ಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಹಾಗೂ ಸಾಂಸ್ಕೃತಿಕ ಸೌಲಭ್ಯ, ಅಂಗವಿಕಲ ಸ್ನೇಹಿ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳಿಗೆ ಕಾರ​‍್ೊರೇಟ್ ಸಂಸ್ಥೆಗಳು ನೆರವು ನೀಡಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.  

ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಿಸಿಎಸ್‌ಆರ್ ಸೆಲ್ ಕಾರ್ಯನಿರ್ವಹಿಸಲಿದ್ದು, ಕೈಗಾರಿಕೆಗಳು ಮತ್ತು ಶಾಲೆಗಳ ನಡುವೆ ಸಮನ್ವಯ, ಒಪ್ಪಂದ ಪ್ರಕ್ರಿಯೆ, ಯೋಜನೆಗಳ ಮೇಲ್ವಿಚಾರಣೆ ಹಾಗೂ ಪಾರದರ್ಶಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಲಾಯಿತು.  ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಲೀಪ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೈಗಾರಿಕೆ ಹಾಗೂ ಕಾರ​‍್ೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.