ಮನಸ್ಸಿನ ಹಿಡಿತದಿಂದ ಮೌಲ್ಯಗಳು ತುಂಬಿದ ವ್ಯಕ್ತಿತ್ವ ಗಳಿಸಬಹುದು: ಹಿರೇಮಠ

ಮನಸ್ಸಿನ ಹಿಡಿತದಿಂದ ಮೌಲ್ಯಗಳು ತುಂಬಿದ ವ್ಯಕ್ತಿತ್ವ ಗಳಿಸಬಹುದು: ಹಿರೇಮಠ By controlling the mind, one can achieve a personality full of values: Hiremath

ಹಾವೇರಿ 11: ಸಾಹಿತ್ಯದ ಅಧ್ಯಯನದಿಂದ ಮನುಷ್ಯನ ಆಂತರಿಕ ವಿಕಾಸವಾಗುತ್ತದೆ. ಬುದ್ಧಿ ಮತ್ತು ಮನಸ್ಸಿನ ಹಿಡಿತದಿಂದ ಮೌಲ್ಯಗಳು ತುಂಬಿದ ವ್ಯಕ್ತಿತ್ವ ಗಳಿಸಬಹುದು. ಉತ್ತಮ ಸಾಹಿತ್ಯದ ಓದಿನಿಂದ ಒಳ್ಳೆಯ ನಾಗರಿಕರು ಸೃಷ್ಟಿಯಾಗುತ್ತಾರೆ.ಓದಿಗೆ ಎಲ್ಲರನ್ನೂ ಬದಲಾಯಿಸುವ ಶಕ್ತಿ ಇದೆ.ಸಮಾಜದಲ್ಲಿಂದು ನಡೆಯುವ ಅನೇಕ ಅವಘಡಗಳಿಗೆ ಓದು ಮತ್ತು ಜ್ಞಾನದ ಕೊರತೆಯೇ ಕಾರಣ.ಇಂದಿನ ಯುವಕರು ಮತ್ತು ಮುಂದಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಕರೆ ನೀಡಿದರು. 

 ನಗರದ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ ರವರ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ನಡೆದ ಪುಸ್ತಕ ಪ್ರೀತಿ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು. 

ಪ್ರತಿಯೊಂದು ಪುಸ್ತಕವು ವಿಮರ್ಶೆಗೆ ಒಳಪಡಬೇಕು.ಲೇಖಕರ ಅನುಭವಗಳನ್ನು ಸಂವಾದಕ್ಕಿಳಿಸಿದರೆ ಓದುಗರ ಮತ್ತು ಹೊಸ ಬರಹಗಾರರ ಸಂದೇಹಗಳಿಗೆ ಉತ್ತರ ಸಿಗುತ್ತದೆ.ಈ ಹಿನ್ನೆಲೆಯಲ್ಲಿ ಈ ಪುಸ್ತಕ ಪ್ರೀತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯ ಮತ್ತು ಇತರೇ ಭಾಗದ ಲೇಖಕರನ್ನು ಮತ್ತು ಓದುಗರನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ.ಇದಕ್ಕೆ ಕಾರಣರಾದ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಇತರೇ ಸಂಸ್ಥೆಗಳನ್ನು ಅಭಿನಂದಿಸಲೇಬೇಕು ಎಂದರು. 

ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಇದು ಪುಸ್ತಕ ಪ್ರೀತಿ ಆರನೇ ಕಾರ್ಯಕ್ರಮವಾಗಿದ್ದು,ಇಲ್ಲಿಯವರೆಗೆ ಒಟ್ಟು 23 ಪುಸ್ತಕಗಳನ್ನು ವಿಮರ್ಶಿಸಿ ಸಮಾಜಕ್ಕೆ ಪರಿಚಯಿಸಲಾಗಿದೆ.ಪಿ.ಸಿ.ಹಿರೇಮಠರವರು ಗೂಳಪ್ಪ ಅರಳಿಕಟ್ಟಿ ಯವರ 'ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ' ಪುಸ್ತಕ ಕುರಿತು ವಿಮರ್ಶಿಸುತ್ತಾ ಲೇಖಕರು ಇತಿಹಾಸವನ್ನು ದಾಖಲಿಸುವಾಗ ಯಾವುದೇ ಪಕ್ಷಪಾತಕ್ಕೆ ಒಳಗಾಗಬಾರದು.ಸತ್ಯನಿಷ್ಠ ಮತ್ತು ವಸ್ತುನಿಷ್ಠ ದಾಖಲೆಗಳನ್ನು ಅನುಸರಿಸಿ ಇತಿಹಾಸವನ್ನು ಬರೆಯಬೇಕು.ಜಿಲ್ಲೆಯ ಮತ್ತಷ್ಟು ಹೋರಾಟಗಾರರನ್ನು ಬೆಳಕಿಗೆ ತರುವಲ್ಲಿ ಅವರು ಶ್ರಮಿಸಲಿ ಎಂದರು. 

ಡಾ. ಶಮಂತಕುಮಾರ ಕೆ.ಎಸ್‌. ರವರು ಮಾಲತಿ ಗೋರೆಬೈಲ್ ರವರ 'ಗುಬ್ಬಿ ಲಾಟೀನು' ಕೃತಿ ಕುರಿತು ಮಾತನಾಡಿದರು.ಲೇಖಕರು ಮತ್ತು ವಿಮರ್ಶಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದೇ ವೇಳೆ ಇತ್ತೀಚೆಗೆ ಡಾ.ಪ್ರಹ್ಲಾದ ಅಗಸನಕಟ್ಟೆ ಸ್ಮಾರಕ ಕಥಾ ಪುರಸ್ಕಾರವನ್ನು ಪಡೆದ ಮಣಿಕಂಠ ಗೋದಮನಿಯನ್ನು ಸನ್ಮಾನಿಸಲಾಯಿತು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ.ಬಿ.ಆಲದಕಟ್ಟಿ ಅಧ್ಯಕ್ಷೀಯ ಭಾಷಣ ಮಾಡಿದರು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಕರಿಯಪ್ಪ ಹಂಚಿನಮನಿ, ಶಂಕರ ತುಮಣ್ಣನವರ, ವಾಗೀಶ ಹೂಗಾರ, ಮಹಾದೇವಿ ಕಣವಿ, ಜುಬೇಧಾ ನಾಯಕ, ರೇಣುಕಾ ಗುಡಿಮನಿ, ನಾಗರಾಜ ಹುಡೇದ, ಸಂತೋಷ ಪಿಸೆ ಮತ್ತು ಇತರರು ಉಪಸ್ಥಿತರಿದ್ದರು. 

ಮೊದಲಿಗೆ ನಿರ್ಮಲಾ ಎಸ್‌.ಸ್ವಾಗತಿಸಿದರೆ, ಮಣಿಕಂಠ ಗೋದಮನಿ ನಿರೂಪಿಸಿ, ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.