ಪಶ್ಚಿಮ ಕೀನ್ಯಾದಲ್ಲಿ ಬಸ್ - ಟ್ರಕ್ ಡಿಕ್ಕಿ : 12 ಸಾವು

   ಕಿಸುಮು, ಕೀನ್ಯಾ ಅ 4:  ಪಶ್ಚಿಮ ಕೀನ್ಯಾದ ಕಿಸುಮುದಲ್ಲಿ ಬಸ್ - ಟ್ರಕ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಓರ್ವ ಮಗು ಮತ್ತು ಕನಿಷ್ಠ 12 ಜನ ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ಕೀನ್ಯಾದ ಸಿಯಾ ಕೌಂಟಿಯಿಂದ ಹೊರಟ ಬಸ್ ಕಿಸುಮುದಲ್ಲಿ ಇನ್ನಷ್ಟು ಪ್ರಯಾಣಿಕರನ್ನು ಹತ್ತಿಸಿಕೊಂಡು ನೈರೋಬಿಯೆಡೆಗೆ ಸಂಚರಿಸುತ್ತಿತ್ತು ಎಂದು ಕಿಸುಮು ಪೊಲೀಸ್ ಕಮಾಂಡರ್ ಬೆನ್ಸನ್ ಮಾವೋ ತಿಳಿಸಿದ್ದಾರೆ. ಕಿಸುಮು - ಕಿರೋಚಿ ಹೆದ್ದಾರಿಯಲ್ಲಿ ವಾಹವನ್ನು ಹಿಂದಿಕ್ಕಲು ಬಸ್ ಚಾಲಕ ಮುಂದಾದಾಗ ನಿಯಂತ್ರಣ ತಪ್ಪಿ ಕಬ್ಬು ಹೊತ್ತೊಯ್ಯುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದ್ದಾರೆ.  ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದ್ದು ಬಸ್ ನಲ್ಲಿ 51 ಪ್ರಯಾಣಿಕರಿದ್ದರು; ಬಸ್ ಮತ್ತು ಟ್ರಕ್ ಚಾಲಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದದಾರೆ ಎಂದು ಅವರು ತಿಳಿಸಿದ್ದಾರೆ.  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ರಕ್ತದಾನಕ್ಕಾಗಿ ಮನವಿ ಮಾಡಲಾಗಿದೆ ಎಂದು ಕೀನ್ಯಾ ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ. ರಸ್ತೆ ಸುರಕ್ಷತೆಗೆ ಅಲ್ಲಿನ ಸರ್ಕಾರ ಮತ್ತು ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದ ನಡುವೆಯೂ ವಾರ್ಷಿಕವಾಗಿ ಕೀನ್ಯಾದಲ್ಲಿ 3 ಸಾವಿರ ಜನರು ಅಸುನೀಗುತ್ತಿದ್ದಾರೆ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಪ್ರಾಧಿಕಾರ ಹೇಳಿದೆ.